ಉದ್ಯಾವರ : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ

ವರದಿ: ಸ್ಟೀವನ್  ಕುಲಾಸೊ, ಉದ್ಯಾವರ

ಉದ್ಯಾವರ : ಕಥೋಲಿಕ್ ಸಭಾ ಉದ್ಯಾವರ ಘಟಕದ ನೇತೃತ್ವದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸಹಕಾರದೊಂದಿಗೆ ಕಾಪು ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅತಿ ವಂ. ಫಾ. ಸ್ಟ್ಯಾನಿ ಬಿ ಲೋಬೊ ಮಾತನಾಡಿ, ಕಾನೂನಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಸ್ತೆಯಲ್ಲಿ ಸಂಚರಿಸುವಾಗ ನಮ್ಮ ಸುರಕ್ಷತೆಗಾಗಿ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಅವರು ನೀಡುವ ಸೇವೆಯನ್ನು ಗೌರವಿಸುವುದರ ಜೊತೆಗೆ ಕಾನೂನು ಪಾಲನೆ ಮಾಡಿ ನಮ್ಮ ಜೀವವನ್ನು ರಕ್ಷಿಸುವುದು ಅತಿ ಅಗತ್ಯ ಎಂದರು.
ಕಟಪಾಡಿ ಠಾಣೆಯ ಎಎಸ್ಸೈ ದಯಾನಂದ್ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಬಗ್ಗೆ ಮಾಹಿತಿ ನೀಡಿದರು. ರಸ್ತೆಯಲ್ಲಿ ಸಂಚರಿಸುವಾಗ ಯಾವ ರೀತಿ ಚಾಲನೆ ಮಾಡಬೇಕು, ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ಮಾಹಿತಿ ಸಭೆಗೆ ನೀಡಿದರು.
ಕಾಪು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ರಮೇಶ್ ಮಾತನಾಡುತ್ತಾ, ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ 112 ನಂಬರ್ ಗೆ ಕರೆ ಮಾಡಿ. ತುರ್ತು ಸ್ಪಂದಿಸುವ ಪೊಲೀಸ್ ತಂಡ ಕ್ಷಣಮಾತ್ರದಲ್ಲಿ ನಿಮ್ಮ ಸ್ಥಳದಲ್ಲಿ ಇರುತ್ತದೆ ಮತ್ತು ನಿಮಗೆ ಸಹಾಯ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ಫಾ. ರೊಲ್ವಿನ್ ಅರಾನ್ಹಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಐಸಿವೈಎಂ ಸುವರ್ಣ ಮಹೋತ್ಸವದ ಅಧ್ಯಕ್ಷ ಮೈಕಲ್ ಡಿಸೋಜ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲಯನ್ ಜೋನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಅಧ್ಯಕ್ಷ ಲಾರೆನ್ಸ್ ಡೇಸಾ ಸ್ವಾಗತಿಸಿದರೆ, ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ ಧನ್ಯವಾದ ಸಮರ್ಪಿಸಿದರು. ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು
.