

ಉದ್ಯಾವರ: 150ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಾರ್ಷಿಕ ಮಹೋತ್ಸವವು ಡಿಸೆಂಬರ್ ಐದು ಮತ್ತು ಆರರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಿನ್ನೆ ಡಿ. 3 ರoದು ಭಾತೃತ್ವ ಮತ್ತು ಐಕ್ಯತೆಯ ಭಾನುವಾರವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಧಾನ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ವo. ಫಾ. ಡಾ. ರಾಜೇಶ್ ರೊಜಾರಿಯೋ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿ, ಭಕ್ತರಿಗೆ ‘ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ’ ಎಂಬ ಸಂದೇಶವನ್ನು ನೀಡಿದರು. ಈ ಸಂದೇಶದಲ್ಲಿ ‘ಕ್ರಿಸ್ತರು ಮನುಷ್ಯ ಜನ್ಮ ತಾಳಿ ಭೂಲೋಕಕ್ಕೆ ಬಂದು ಮನುಷ್ಯತ್ವ ಕಾಪಾಡಿಕೊಂಡು ದೇವರ ಪ್ರತಿಬಿಂಬವಾಗಿ ಜೀವಿಸಿದರು. ಅವರಂತೆಯೇ ನಾವು ಕೂಡ ದೇವರ ಪ್ರತಿಬಿಂಬವಾಗಿ ಬಾಳಿ ತೋರಿಸಬೇಕು. ಇದೇ ನಾವು ಕ್ರಿಸ್ತನಿಗೆ ಕೊಡುವ ಅತ್ಯುನ್ನತ ಕೊಡುಗೆ’ ಎಂದರು.
ಪವಿತ್ರ ಬಲಿಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆಯನ್ನು ಪ್ರಧಾನ ಧರ್ಮ ಗುರುಗಳು ನೆರವೇರಿಸಿದರು. ವಿಶೇಷ ಅಲಂಕೃತ ವಾಹನದಲ್ಲಿ ಪರಮ ಪ್ರಸಾದದ ಭವ್ಯ ಮತ್ತು ಭಕ್ತಿಪೂರ್ವಕ ಮೆರವಣಿಗೆ ನಡೆಯಿತು.
‘ಪರಮ ಪ್ರಸಾದದಲ್ಲಿ ನಮ್ಮ ಹೃದಯಗಳನ್ನು ಪ್ರಜ್ವಲಿಸಿ, ಸಮಾಜದಲ್ಲಿ ಕ್ರಿಸ್ತನ ಪ್ರತಿರೂಪಗಳಾಗಿ ಬಾಳೋಣ’ ಎಂಬ ಸಂದೇಶದೊಂದಿಗೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ದೇವಾಲಯದ ಪ್ರಧಾನ ಧರ್ಮಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮ ಗುರುಗಳಾದ ವo. ಲಿಯೋ ಪ್ರವೀಣ್ ಡಿಸೋಜ, ಧರ್ಮಭಗಿನಿಯರು ಮತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದರು.


