

ಉಡುಪಿ : ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗರಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ, ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಶೇಕ್ ವಹಿದ್ ಉಡುಪಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಡಾ. ಶೇಕ್ ವಹಿದ್ ಉಡುಪಿ, ಕಷ್ಟದಲ್ಲಿರುವ ರೋಗಿಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಅವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್ ರವರನ್ನು ಭೇಟಿ ಮಾಡಿದ ಡಾ. ಶೇಕ್ ವಹಿದ್ ತನ್ನಿಂದ ಸಾಧ್ಯವಾಗುವ ನೆರವು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಾಧಿಕ್, ಸುಮಂತ್, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ರೊಯ್ಸ್ ಫೆರ್ನಾಂಡಿಸ್, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ರಿಯಾಜ್ ಪಳ್ಳಿ, ವಿಲ್ಸನ್ ಸಿಕ್ವೇರಾ, ಅಬ್ದುಲ್ ಮುನಫ್ ಉಪಸ್ಥಿತರಿದ್ದರು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ 100 ರೋಗಿಗಳಿಗೆ ಈ ಸಂದರ್ಭದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
