

ಉಡುಪಿ, ಮಾ.೧೩ : ಬೆಲೆ ಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬಲ ನೀಡಲು ಗ್ಯಾರಂಟಿಗಳನ್ನು ನೀಡುವ ಮೂಲಕ ಬಡವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಉಡುಪಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ವೇಳೆ ಹಲವಾರು ಅಭಿವೃದ್ಧಿ ಕಾಮಾಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಬಿಜೆಪಿ ಯಿಂದ ಜನರಿಗೆ ತಪ್ಪು ಮಾಹಿತಿ- ಬಿಜೆಪಿಯವರು ಗ್ಯಾರಂಟಿಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಗ್ಯಾರಂಟಿಗಳು ಎಲ್ಲರಿಗೂ ತಲುಪಬೇಕೆಂಬ ಉದ್ದೇಶದಿಂದ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದೇವೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿಗೆ ದುಡ್ಡು ಇರಿಸಲು ಸಾಧ್ಯವಿಲ್ಲ ಎಂಬ ಟೀಕೆ ಬಂದಿತು. ಪ್ರಧಾನಿಯವರು ಗ್ಯಾರಂಟಿಗಳಿಂದ ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗುತ್ತದೆ ಎಂದು ನುಡಿದಿದ್ದರು.ಆದರೆ ಈ ವರ್ಷ 36 ಸಾವಿರ ಹಾಗೂ ಮುಂದಿ ವರ್ಷ 52009 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಈ ಬಜೆಟ್ ನಲ್ಲಿ ನಿಗದಿಪಡಿಸಿದ್ದರೂ, ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.