ಓಸ್ಕರ್ ಫೆರ್ನಾಂಡಿಸ್‍ ನಿಧನಕ್ಕೆ ಉಡುಪಿ ಬಿಷಪ್‌ ಸಂತಾಪ ಭಾಷ್ಪಾಂಜಲಿ

JANANUDI.COM NETWORK


ಕರಾವಳಿ ಕರ್ನಾಟಕದ ಅತ್ಯಂತ ಗೌರವಾನ್ವಿತ ರಾಜಕಾರಣಿ, ಜನಾನುರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ರೀಯುತ ಓಸ್ಕರ್ ಫೆರ್ನಾಂಡಿಸ್‍ರವರು ಅಸ್ತಂಗತರಾದ ಸುದ್ಧಿಯು ನಮ್ಮನ್ನು ಅತೀವ ದುಃಖಿತರನ್ನಾಗಿಸಿದೆ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವಾಗ, ಅವರ ಕುಟುಂಬದ ಸದಸ್ಯರಿಗೆ ಈ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ಅವರನ್ನು ಹೃತ್ಪೂರ್ವಕವಾಗಿ ಸಂತೈಸುತ್ತೇವೆ.
ಉಡುಪಿಯ ದೇಶಭಕ್ತ ಫೆರ್ನಾಂಡಿಸ್ ಕುಟುಂಬದಲ್ಲಿ ಜನಿಸಿ, ಸಮುದಾಯದ ನಾಯಕನಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 1980 ರಿಂದ 1996 ರವರೆಗೆ ಸತತವಾಗಿ ಐದು ಬಾರಿ ಗೆದ್ದು ಬಂದು ದೇಶಸೇವೆಯಲ್ಲಿ ತಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಂಡವರು ಶ್ರೀಯುತ ಓಸ್ಕರ್ ಫೆರ್ನಾಂಡಿಸ್‍ರವರು. ಅನಂತರ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 2004 ಮತ್ತು 2009 ರ ಡಾ| ಮನಮೋಹನ್ ಸಿಂಗ್‍ರವರ ನಾಯಕತ್ವದ ಯುಪಿಎ ಕೇಂದ್ರ ಸರ್ಕಾರದಲ್ಲಿ ರಾಜ್ಯ ಮಂತ್ರಿಯಾಗಿ ಅಂಕಿ ಅಂಶಗಳು, ರಸ್ತೆ ಮತ್ತು ಸಾರಿಗೆ, ಯುವಜನ ಮತ್ತು ಕ್ರೀಡೆ, ಶ್ರಮ ಮತ್ತು ಉದ್ಯೋಗ ಇನ್ನಿತರ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.


ಸಮರ್ಥ ನಾಯಕರೂ, ಬಹುಮುಖ ಪ್ರತಿಭೆಯೂ ಆಗಿದ್ದ ಶ್ರೀಯುತ ಆಸ್ಕರ್ ಫೆರ್ನಾಂಡಿಸ್‍ರವರು ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ತವುಳ್ಳವರು. ತಮ್ಮ ರಾಜಕೀಯ ಪ್ರಭಾವದಿಂದ ಕಷ್ಟದಲ್ಲಿ ಸಿಲುಕಿಕೊಂಡ ಬಹಳಷ್ಟು ಜನರಿಗೆ ಸಹಾಯಹಸ್ತವನ್ನು ನೀಡಿ ಮೇಲೆತ್ತಿದವರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಸುಸಂಸ್ಕೃತರಾಗಿ ಜೀವಿಸಿದ್ದರು. ಅವರು ಕ್ರೈಸ್ತ ಧರ್ಮದ ಅನುಯಾಯಿಗಳಾಗಿದ್ದರೂ, ಇತರ ಧರ್ಮದ ನಾಯಕರು ಹಾಗೂ ಜನರೊಂದಿಗೆ ಅನ್ಯೋನ್ಯ ಸಂಬಂಧವನ್ನು ಇರಿಸಿಕೊಂಡಿದ್ದರು. ಉಡುಪಿಯನ್ನು ಪ್ರತಿನಿಧಿಸುವ ನಾಯಕರಾಗಿ ಅವರು ಉಡುಪಿ ಕೃಷ್ಣ ಮಠದೊಂದಿಗೆ ನಿಕಟ ಸಂಪರ್ಕವನ್ನು ಇರಿಸಿಕೊಂಡಿದ್ದರು.
ಶ್ರೀ ಆಸ್ಕರ್ ಫೆರ್ನಾಂಡಿಸ್‍ರವರ ಅಗಲುವಿಕೆಯಿಂದ ಕರಾವಳಿ ಕರ್ನಾಟಕದ ಬಲಿಷ್ಠ ಕೊಂಡಿಯೊಂದು ಕಳಚಿಕೊಂಡಿದೆ. ದಿವಂಗತರ ಆತ್ಮಕ್ಕೆ ದಯಾಮಯ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಅಗಲಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಆ ಭಗವಂತನೇ ಸಾಂತ್ವನವಾಗಲಿ ಎಂದು ಪ್ರಾರ್ಥಿಸುತ್ತೇನೆ.