JANANUDI.COM NETWORK

ಉಡುಪಿ : ಕಲೆ, ಸಾಹಿತ್ಯ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ನಾಲ್ಕನೇ ವರ್ಷದ 3ದಿನಗಳ ನಿರಂತರ್ ನಾಟಕೋತ್ಸವಕ್ಕೆ ಚಾಲನೆ ದೊರಕಿತು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಸ್ಟ್ಯಾನಿ ಬಿ ಲೋಬೋ ರವರು, ಕೊಂಕಣಿಯ ಏಕಮಾತ್ರ ಸಂಗೀತ ಸಾಧನ “ಗುಮಟ್” ಬಾರಿಸುವುದರೊಂದಿಗೆ 3ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 3 ವರ್ಷಗಳಿಂದ ವಿವಿಧ ನಾಟಕಗಳ ಮೂಲಕ ಕಲೆಯ ರುಚಿಯನ್ನು ಈ ಸಂಸ್ಥೆ ನಮಗೆ ನೀಡಿದೆ. ಇದರಿಂದ ನಮ್ಮ ಜ್ಞಾನ ಹೆಚ್ಚಾಗಿದೆ. ನಾಟಕವೊಂದು ಮಾಧ್ಯಮ. ನಾಟಕ ಬರಹಗಾರ ಮತ್ತು ನಾಟಕಕಾರ ತಮ್ಮ ಕಲೆಯ ಮೂಲಕ ಸಮಾಜದ ಮೇಲೆ ತಮ್ಮ ಪ್ರಭಾವ ಬೀರುತ್ತಾರೆ. ಸಮಾಜದಲ್ಲಿ ನಡೆಯುವ ಸರಿತಪ್ಪುಗಳನ್ನು ನಾಟಕಕಾರ ತನ್ನ ನಟನೆಯ ಮೂಲಕ ಸಮಾಜದ ಬದಲಾವಣೆಗೆ ಕಾರಣ ಮಾಡಿಸುತ್ತಾರೆ. ಇಂತಹ ನಾಟಕೋತ್ಸವಗಳ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದು. ಇಂತಹ ಸಂಘಟನೆಗಳಿಗೆ ಕಲಾಭಿಮಾನಿಗಳು ಸಹಕಾರ ನೀಡುವುದರಿಂದ ಸಮಾಜ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಗೋಡ್ಫ್ರಿ ಡಿಸೋಜ ಶುಭ ಹಾರೈಸಿದರು. ನಾಟಕೋತ್ಸವದ ಸಂಚಾಲಕ ರೊನಾಲ್ಡ್ ಡಿಸೋಜ, ಕಾರ್ಯದರ್ಶಿ ಒಲಿವೇರ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ್ ಅಧ್ಯಕ್ಷ ಸ್ಟೀವನ್ ಕುಲಾಸೊ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಮೊದಲ ದಿನ ನಾಟಕವನ್ನು 600ಕ್ಕೂ ಹೆಚ್ಚು ಕಲಾಭಿಮಾನಿಗಳು ವೀಕ್ಷಿಸಿದರು.
ಉದ್ಯಾವರದ ಐಸಿವೈಎಂ ಉದ್ಯಾವರ ಸುವರ್ಣಮಹೋತ್ಸವ ರಂಗ ಮಂಟಪದಲ್ಲಿ 3 ದಿನಗಳಲ್ಲಿ 4 ಕೊಂಕಣಿ ನಾಟಕಗಳು ಪ್ರದರ್ಶನವಾಗಲಿದೆ. ಮೊದಲ ದಿನ ‘ರಾಯಾಚಿ ಮುಸ್ತಾಯ್ಕಿ’, ‘ಮುಜ್ಯಾ ಪುತಾಚೊ ಕಿಣ್ಕುಳೊ’, ದ್ವಿತೀಯ ದಿನ ಡೆನಿಸ್ ಮೊಂತೆರ್ ನಿರ್ದೇಶನದ, ಅಸ್ತಿತ್ವ ತಂಡದ ಕಲಾವಿದರು ಪ್ರಸ್ತುತ ಪಡಿಸುತ್ತಿರುವ ‘ಹಾಂಡೊ ಉಟ್ಲಾ’ ಮತ್ತು ಕೊನೆಯ ದಿನ ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ ‘ಸಂಪದ್ಲೆ’ ನಾಟಕ ಪ್ರದರ್ಶನವಾಗಲಿದೆ.










