ಉತ್ತಮ ಜೀವನಕ್ಕಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಬೇಕು :ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಉತ್ತಮ ಜೀವನಕ್ಕಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ್ ಹೇಳಿದರು.
ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿದ್ಯಾರ್ಥಿಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಶಿಕ್ಷಣ ಇದ್ದರೂ ಕೌಶಲ್ಯ ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಕೌಶಲ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಬಷೀರ್ ಅಹ್ಮದ್ ಮಾತನಾಡಿ, ಕಾಲೇಜಿನ ಅಭಿವೃದ್ಧಿಯಲ್ಲಿ ಸರ್ಕಾರದ ಜತೆಗೆ ಸಮುದಾಯದ ಪಾತ್ರವೂ ಇದೆ. ಇಲ್ಲಿನ ಉಪನ್ಯಾಸಕರು, ಶಿಕ್ಷಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಗ್ರಾಮೀಣ ಪ್ರದೇಶದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಸೀನಪ್ಪ, ಡಾ. ಆರ್.ರವಿಕುಮಾರ್, ಉಪನ್ಯಾಸಕ ಡಾ. ಶೇಷಗಿರಿರಾವ್, ಶಿಕ್ಷಕ ಲಕ್ಷ್ಮಣಸಿಂಗ್, ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ಸದಸ್ಯೆ ನಜೀಮ್ ಉನ್ನೀಸಾ, ಮುಖಂಡರಾದ ರಮೇಶ್, ಚೆನ್ನಪ್ಪ, ಸತೀಶ್ ಕುಮಾರ್, ಮಹಮದ್, ರಾಮಪ್ಪ, ಪೆದ್ದಪ್ಪಯ್ಯ ಇದ್ದರು.
ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.