

ಕೋಲಾರ:- ಕೋಲಾರ ಕ್ರೀಡಾ ಸಂಘದ ಗರಡಿಯಲ್ಲಿ ಕೃಷ್ಣಮೂರ್ತಿ ಮತ್ತು ಸುರೇಶಬಾಬುರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಆಯ್ಕೆಗೊಂಡು ಇದೀಗ ಸೇನಾ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಹೊರಟ ಅಗ್ನಿವೀರರಿಗೆ ಶುಭಹಾರೈಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಗರದ ಜಯನಗರದ ಅಂಬೇಡ್ಕರ್ ಮಕ್ಕಳ ಉದ್ಯಾನವದಲ್ಲಿರುವ ಹುತಾತ್ಮ ಸೈನಿಕ ಸ್ಮಾರಕಕ್ಕೆ ಆಯ್ಕೆಯಾದ ಎಲ್ಲಾ ಅಗ್ನಿವೀರರು ಗೌರವ ವಂದನೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯಕ್ಕೆ ತೆರಳಲು ಸಜ್ಜಾಗಿದ್ದು ವಿಶೇಷವಾಗಿತ್ತು.
ಅಗ್ನಿವೀರರಾದ ಬಾಲಾಜಿ ಟಿ.ಎಚ್, ತೊರದೇವಂಡಹಳ್ಳಿಯ ವಿನಯ್ಟಿ.ಎಸ್., ಕುಂಬಾರಹಳ್ಳಿಯ ನಾಗರಾಜಪ್ರಸಾದ್, ತೊಟ್ಟಿಗಾನಹಳ್ಳಿಯ ಪವನ್ಎಸ್, ಬಾರಂಡಳ್ಳಿಯ ಶ್ರೀನಿವಾಸ ಎಸ್, ಸೀಪುರದ ಅಭಿಷೇಕ್ಗೌಡ ಮಾತನಾಡಿ, ಭಾರತೀಯಸೇನೆಗೆ ಹೇಗೆ ಸೇರಬೇಕು, ಯಾವ ರೀತಿ ಸಿದ್ಧತೆ ನಡೆಸಬೇಕು ಎಂಬ ಬಗ್ಗೆ ಕಿಂಚಿತ್ತೂ ತಿಳಿಯದ ತಾವುಗಳು ಭಾರತೀಯ ಸೇನೆಯ ಹೆಮ್ಮೆಯ ಯೋಧರಾಗಲು ಶ್ರಮವಹಿಸಿದ ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶಬಾಬು ಮತ್ತು ಹಿರಿಯ ತರಬೇತುದಾರ ಪುರುಷೋತ್ತಮ ರವರು ನೀಡಿದ ಮಾರ್ಗದರ್ಶನ ಮತ್ತು ಕೋಲಾರ ಕ್ರೀಡಾ ಸಂಘ ನೀಡಿದ ಅವಕಾಶದ ವೇದಿಕೆಯನ್ನು ಸ್ಮರಿಸಿದರು.
ಭಾರತೀಯ ಸೇನೆಗೆ ನೀನು ಆಯ್ಕೆಯಾಗುವುದೇ ಎಂದು ಹೀಯಾಳಿಸಿದವರೇ ಇಂದು ಹೆಮ್ಮೆ ಪಡುತ್ತಿದ್ದಾರೆ, ತಮ್ಮ ಕುಟುಂಬ ಮತ್ತು ತಮ್ಮ ಹಳ್ಳಿಯಲ್ಲಿ ತಮಗೆ ಸಿಗುತ್ತಿರುವ ಗೌರವ, ಜನ ತಮ್ಮ ಬಗ್ಗೆ ತೋರಿಸುವ ಆದರ ಮತ್ತು ಹೆಮ್ಮೆಯ ಬಗ್ಗೆ ಈ ಬಾರಿ ತರಬೇತಿ ಪಡೆಯಲು ಬಂದ ಯುವಕರಿಗೆ ವಿವರಿಸಿದರು.
ಅಗ್ನಿವೀರರನ್ನುದ್ದೇಶಿಸಿ ಮಾತನಾಡಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ದೇಶಸೇವೆಯೆಂಬುದು ಎಲ್ಲರಿಗೂ ಸಿಗುವಂತÀದಲ್ಲ. ಗಡಿಯಲ್ಲಿ ದೇಶಕಾಯುವ ಸೈನಿಕರು ನಿಜವಾದ ಹೀರೋಗಳು. ನೀವು ನಮ್ಮ ಕೋಲಾರದ ಹೆಮ್ಮೆ. ಇದೊಂದು ಸಾರ್ಥಕ ಕ್ಷಣ, ನಮ್ಮ ಜಿಲ್ಲೆಯಿಂದ ಇನ್ನಷ್ಟು ಯುವಕರು ಸೇನೆಗೆ ಸೇರಲು ನೀವು ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
ಯುವಕರಿಗೆ ಉಚಿತವಾಗಿ ತರಬೇತಿ ನೀಡಿ ಸೈನ್ಯಕ್ಕೆ ಸೇರಲು ಪ್ರೇರೇಪಿಸಿ ದೇಶ ಸೇವೆ ಸಲ್ಲಿಸುತ್ತಿರುವ ಕೋಲಾರ ಕ್ರೀಡಾ ಸಂಘ ಮತ್ತು ಅದರ ತರಬೇತುದಾರರನ್ನು ಅವರು ಶ್ಲಾಘಿಸಿದರು.
ಇತ್ತೀಚೆಗಷ್ಟೇ ತಮ್ಮ ಸಹೋದರ ಕರ್ನಲ್ ಅಮರನಾಥ್ರ ನಿಧನದ ಶೋಕದಿಂದ ಹೊರಬಾರದ ಪೆÇಲೀಸ್ ಅಧಿಕಾರಿ ವಂದೇಮಾತರಂ ಸೋಮಶೇಖರ್ ಮಾತನಾಡಿ, ಸೈನ್ಯಕ್ಕೆ ಸೇರಿದ ಮೇಲೆ ಹೇಗಿರಬೇಕು, ಆರೋಗ್ಯದ ರಕ್ಷಣೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು. ಅದೂ ಅಲ್ಲದೇ ತಮ್ಮ ಹಳ್ಳಿಗಳಲ್ಲಿಯ ಯುವಕರನ್ನು ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸುವುದಲ್ಲದೇ ರಜೆಯಲ್ಲಿ ಬಂದಾಗ ತಾವೇ ಮುಂದೆ ನಿಂತು ಅವರಿಗೆ ತರಬೇತಿ ನೀಡಿ ಮಾರ್ಗದರ್ಶಕರಾಗಿ ಸೈನ್ಯಕ್ಕೆ ಸೇರಲು ಸಹಾಯ ಮಾಡಬೇಕು ಎಂದರು.
ತರಬೇತುದಾರ ಕೃಷ್ಣಮೂರ್ತಿ ಸೈನ್ಯಕ್ಕೆ ಸೇರಿದಾಗ ವಹಿಸಬೇಕಾದ ಜಾಗ್ರತೆ, ಆರೋಗ್ಯದ ಕುರಿತಾಗಿ ವಹಿಸಬೇಕಾದ ಎಚ್ಚರಿಕೆ, ಸಹಸೈನಿಕರೊಂದಿಗೆ ಸಮನ್ವಯ ಸಾಸುವ ಬಗ್ಗೆ ಯುವಕರಿಗೆ ತಿಳಿಸಿದರು. ಭಾರತೀಯ ಸೈನ್ಯದ ಸೇವೆಗೆ ಹೋಗುತ್ತಿರುವ ಯುವ ಯೋಧರ ಕುಟುಂಬಗಳಲ್ಲಿ ಸಮಸ್ಯೆಯಾದಾಗ ಮುಕ್ತವಾಗಿ ತಿಳಿಸಿ ನಾವೆಲ್ಲರೂ ಅವರೊಂದಿಗೆ ಇರುತ್ತೇವೆ ಎಂದು ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಹಿರಿಯ ತರಬೇತಿದಾರರಾದ ಪುರುಷೋತ್ತಮ ಮಾತನಾಡಿ, ಯಾವುದೇ ಯುವಕರಿಗೆ ನಿರ್ದಿಷ್ಟ ಗುರಿ, ಆಸಕ್ತಿ ಮತ್ತು ಸೂಕ್ತ ತರಬೇತಿ ಮಾರ್ಗದರ್ಶನ ಸಿಕ್ಕರೆ ಏನು ಬೇಕಾದರೂ ಸಾಸಬಹುದು ಎನ್ನುವುದಕ್ಕೆ ಕೋಲಾರ ಕ್ರೀಡಾಸಂಘದಿಂದ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾಗಿರುವ ಈ ಯೋಧರೇ ಸಾಕ್ಷಿ ಎಂದರು.
ತರಬೇತುದಾರ ಸುರೇಶ್ ಬಾಬು ಮಾತನಾಡಿ, ನಿರ್ದಿಷ್ಟ ಛಲ ಮತ್ತು ಕಠಿಣ ಪರಿಶ್ರಮ ಇಂದು ಕೋಲಾರದ ಗ್ರಾಮೀಣ ಯುವಕರನ್ನು ಭಾರತೀಯ ಸೇನೆಗೆ ಆಯ್ಕೆ ಮಾಡಿದೆ, ನಾವುಗಳು ಹೊಸದಾಗಿ ಮಾಡಿದ್ದೇನು ಇಲ್ಲ ತಮಗೆ ಗೊತ್ತಿರುವ ಕೌಶಲ್ಯವನ್ನು ಇವರಿಗೂ ಕಲಿಸಿದ್ದೇವೆ ಎಂದರು.
ಕೋಲಾರ ಕ್ರೀಡಾ ಸಂಘದ ಕಾರ್ಯದರ್ಶಿ ಹರೀಶ್ ಬಾಬುರವರು ಅಗ್ನಿವೀರರಿಗೆ ಶುಭಕೋರಿದರು.
