ಕೋಲಾರ: ಕೋಲಾರ ಪತ್ರಿಕೆ ಸಂಪಾದಕ ಕೆ.ಪ್ರಹ್ಲಾದರಾವ್ ಅವರಿಗೆ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರು, ರಾಯರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ, ನುಡಿನಮನ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ‘ಕೋಲಾರ ಪತ್ರಿಕೆಯ ನಂಬರ್ ಒನ್ ಸ್ಥಾನವನ್ನು ಕಸಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕೋಲಾರ ಪತ್ರಿಕೋದ್ಯಮದ ದಂತಕತೆ ರಾಯರು. ಅವರ ಸಾಹಸ ಹಾಗೂ ಧೈರ್ಯ ಮೆಚ್ಚುವಂಥದ್ದು. ಸೇವೆ ಎಂದೇ ಭಾವಿಸಿದ್ದರು. ಆದರೆ, ಈಗಿನ ಪತ್ರಿಕೋದ್ಯಮದಲ್ಲಿ ಹೊಟ್ಟೆಪಾಡು ದೊಡ್ಡದಾಗಿದೆ’ ಎಂದರು.
‘ಶಿಸ್ತಿನ ಜೀವನ ನಡೆಸಿದರು. ಯಾರ ವಿರೋಧ ಕಟ್ಟಿಕೊಂಡವರಲ್ಲ. ಕೋಲಾರ ಪತ್ರಿಕೆಯ ನಿರಂತರತೆ ಅದ್ಭುತ. ಒಂದೂ ದಿನ ನಿಲ್ಲಲಿಲ್ಲ. ಸಾಹಿತ್ಯಕವಾಗಿ ಹಾಗೂ ಸಾಮಾಜಿಕವಾಗಿ ವೇದಿಕೆ ಸೃಷ್ಟಿ ಮಾಡಿ ಸಾಹಿತಿಗಳನ್ನು ಕೋಲಾರ ಪತ್ರಿಕೆ ಬೆಳೆಸಿದೆ’ ಎಂದು ಹೇಳಿದರು.
‘ಕೋಲಾರ ಪತ್ರಿಕೋದ್ಯಮಕ್ಕೆ ಹಾದಿ ತೋರಿದವರು ಪ್ರಹ್ಲಾದ ರಾವ್, ಪತ್ರಿಕೋದ್ಯಮದಲ್ಲಿ ಚಾಪು ಮೂಡಿಸಿದರು. ಆ ಪತ್ರಿಕೆ ಆತ್ಮ, ಉಸಿರು ಆಗಿತ್ತು. ಆ ಪತ್ರಿಕೆ ಮುಂದುವರಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದರು.
ಯಾಜಮಾನಿಕೆ ಸಂಸ್ಕೃತಿ ಹೋಗಿ ಹಿರಿಯರ ಹಾಕಿಕೊಟ್ಟ ದಾರಿಯಲ್ಲಿ ನಿಸ್ವಾರ್ಥದಿಂದ ನಡೆಯಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ ಮಾತನಾಡಿ, ‘ಪ್ರಹ್ಲಾದರಾವ್ ತಾವು ನಂಬಿದ ಸಿದ್ಧಾಂತದಂತೆ ನಡೆದರು. ಸಂಕಷ್ಟದ ಸಮಯದಲ್ಲಿ ಪತ್ರಿಕೆ ಹೊರತಂದರು. ಅವರ ಮಾರ್ಗದಲ್ಲಿ ಕುಗ್ಗದೆ, ಬೀಗದೆ, ಹೆದರದೆ ಪತ್ರಕರ್ತರು ಹೆಜ್ಜೆ ಇಡಬೇಕು’ ಎಂದರು.
ಹಿರಿಯ ಪತ್ರಕರ್ತ ಬಿ. ಸುರೇಶ್ ಮಾತನಾಡಿ, ಸ್ಥಳೀಯ ಪತ್ರಿಕೆಯನ್ನು ಬೆಳೆಸಿದ ಕೀರ್ತಿ ಪ್ರಹ್ಲಾದರಾವ್ ಅವರದ್ದು. ಉಚಿತವಾಗಿ ಪತ್ರಿಕೆ ನೀಡಿದರೆ ಮೌಲ್ಯ ಇರಲ್ಲ ಎಂಬುದು ಅವರ ನಂಬಿಕೆ ಆಗಿತ್ತು’ ಎಂದರು.
ಪತ್ರಕರ್ತ ಶ್ರೀನಿವಾಸಮೂರ್ತಿ ಮಾತನಾಡಿ, ಹಲವರಿಗೆ ಬರವಣಿಗೆ ಕಲಿಸಿ ಬದುಕು ಕಟ್ಟಿಕೊಟ್ಟರು. ತಮಗಿಂತ ಉಳಿದವರು ಚೆನ್ನಾಗಿ ಬರೆಯಬೇಕು, ಬೆಳೆಯಬೇಕು ಎಂಬ ಇಂಗಿತ ಹೊಂದಿದ್ದರು. ವ್ಯವಾಹರಿಕವಾಗಿ ಕಠಿಣವಾಗಿದ್ದರು. ಅವರ ಶಿಷ್ಯರ ಬಳಗ ಬಹಳಷ್ಟಿದೆ’ ಎಂದು ಹೇಳಿದರು.
ರಾಜ್ಯಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ‘ಜನಸಂಪರ್ಕ ಹೊಂದಿದ್ದರು. ಎಲ್ಲಾ ವರ್ಗದ ಪ್ರೀತಿ ಪಾತ್ರರಾಗಿದ್ದರು. ಅಪಾರ ಸ್ನೇಹವರ್ಗ ಹೊಂದಿದ್ದರು. ಶಿಸ್ತಿನ ಜೀವನ ಸಾಗಿಸಿದರು. ಸರಳಸಜ್ಜನಿಕೆಯ ವ್ಯಕ್ತಿ’ ಎಂದು ಬಣ್ಣಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ‘ರಾಯರಿಗಿಂತ ಮೊದಲು ನನಗೆ ಅವರ ಪತ್ರಿಕೆ ಪರಿಚಯವಾಗಿತ್ತು. ಆಗ ನಾನು ಕವನ ಬರೆಯುತ್ತಿದ್ದೆ. ಈಗಲೂ ಆ ಲೇಖನಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ. ತಮ್ಮದೇಅದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದರು. ಅವರಂತೆ ಮತ್ತೊಂದು ಸ್ಥಳೀಯ ಪತ್ರಿಕೆಯನ್ನು ಯಾರೂ ರೂಪಿಸಿಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ರಾಯರು ರಾತ್ರಿ 12ರವರಗೆ ಕೆಲಸ ಮಾಡಿದ್ದರೂ ಬೆಳಿಗ್ಗೆ ಬೇಗನೇ ಹೇಳುತ್ತಿದ್ದರು. ತಮ್ಮ ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದರು. ರಾಜ್ಯ, ದೇಶದ ಸುದ್ದಿಗಳಿಗೆ ರಾಜ್ಯ ಪತ್ರಿಕೆಗಳು ಇವೆ ಎಂಬುದಾಗಿ ಹೇಳುತ್ತಿದ್ದರು ಎಂದರು.
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಎಸ್.ಸಚ್ಚಿದಾನಂದ, ಮಾಮಿ ಪ್ರಕಾಶ್, ಪಾ.ಶ್ರೀ.ಅನಂತರಾಮ್, ಸಿ.ವಿ.ನಾಗರಾಜ್, ಎಂ.ಡಿ.ಚಾಂದ್ ಪಾಷ, ಓಂಕಾರಮೂರ್ತಿ, ವಿ. ಈಶ್ಚರ್, ಎಸ್.ರವಿಕುಮಾರ್, ಮದನ್, ಆಸೀಫ್ ಪಾಷ, ಸರ್ವಜ್ಞ ಮೂರ್ತಿ, ಸುದರ್ಶನ್, ತಬ್ರೇಜ್, ಮುಕ್ತಿಯಾರ್, ಸಮೀರ್ ಅಹ್ಮದ್, ಬೆಟ್ಟಣ್ಣ, ಗಂಗಾಧರ್, ಗೋಪಿ, ಸಿ.ಅಮರೇಶ, ಮುಳಬಾಗಿಲು ಅಪ್ಪಾಜಿಗೌಡ, ಶ್ರೀನಿವಾಸಪುರದ ಲಕ್ಷ್ಮಣ್, ನಾರಾಯಣಮೂರ್ತಿ, ಮಾಲೂರಿನ ನಾರಾಯಣಸ್ವಾಮಿ, ವೆಂಕಟೇಶ್, ಪುರುಷೋತ್ತಮ್, ವಿನೋದ್ ಉಪಸ್ಥಿತರಿದ್ದರು.