

ಜನಾಂಗೀಯ ಹಿಂಸಾಚಾರ ಕೇಂದ್ರ ಸರಾಕಾರದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಮಣಿಪುರದ 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ
ಮಣಿಪುರದ ಕುಕಿ-ಜೋ ಸಮುದಾಯದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) 3 ಜಿಲ್ಲೆಗಳಲ್ಲಿ, ಸಮುದಾಯದ ಸದಸ್ಯರು ಸ್ವಯಂ ಆಡಳಿತವನ್ನು ಹೊಂದಿರಲಿದ್ದಾರೆ ಎಂದು ಘೋಷಿಸಿದ್ದಾರೆ.
ಐಟಿಎಲ್ಎಫ್ ಪ್ರಧಾನ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಅವರು ತೆಂಗ್ನೌಪಾಲ್, ಕಾಂಗ್ಪೊಕ್ಪಿ ಮತ್ತು ಚುರಾಚಂದ್ಪುರ ಜಿಲ್ಲೆಗಳಲ್ಲಿ ಕುಕಿ-ಜೋ ಜನರು ಸ್ವಯಂ ಆಡಳಿತದ ವ್ಯಾಪ್ತಿಗೆ ಬರುತ್ತಾರೆ ಮತ್ತು ಸಮುದಾಯವು ಮೈತೈ ಮಣಿಪುರ ಸರ್ಕಾರದಿಂದ ಯಾವುದೇ ನಿರೀಕ್ಷೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರವು ನಮ್ಮನ್ನು ಗುರುತಿಸದಿದ್ದರೂ ನಾವು ಹೆದರುವುದಿಲ್ಲ. ಕಳೆದ ಒಂದು ತಿಂಗಳಿನಿಂದ ಈ ಕುರಿತು ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರದ ತಾರತಮ್ಯವು ಸಮುದಾಯ ಸ್ವಯಂ ಆಡಳಿತವನ್ನು ಘೋಷಿಸಲು ಕಾರಣವಾಯಿತು ಎಂದು ಹೇಳಿದರು.
ಐಟಿಎಲ್ಎಫ್ ತನ್ನ ಬೇಡಿಕೆಗಳನ್ನು 2 ವಾರಗಳಲ್ಲಿ ಈಡೇರಿಸದಿದ್ದರೆ, ಕೇಂದ್ರ ಸರ್ಕಾರ ಗುರುತಿಸಲಿ ಅಥವಾ ಗುರುತಿಸದಿರಲಿ ಸ್ವಯಂ ಸರ್ಕಾರವನ್ನು ಸ್ಥಾಪಿಸುವುದಾಗಿ ಗಡುವು ನೀಡಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು.
ಮೇ 3ರಂದು ಹಿಂಸಾಚಾರದ ಬಳಿಕ ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಸ್ಥಳಾಂತರಗೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಎನ್.ಬಿರೇನ್ ಸಿಂಗ್ ನೇತೃತ್ವದ ಮೈತೈ ಬಹುಮತದ ಸರ್ಕಾರವು ತಮ್ಮ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಕುಕಿ ಸಮುದಾಯದ ಶಾಸಕರುಗಳು ಹೇಳಿದ್ದರು.
ಐಟಿಎಲ್ಎಫ್ನ ಮುವಾನ್ ಟಾಂಬಿಂಗ್ ಮಾತನಾಡಿ, ಸಮುದಾಯವು ಪ್ರತ್ಯೇಕ ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇಂಫಾಲ್ನಿಂದ ಅನಿವಾರ್ಯವಾಗಿ ಹೊರಗೆ ತೆರಳಿ ಈಗ ಮರಳಲು ಸಾಧ್ಯವಾಗದೆ ಇರುವ ಸಮುದಾಯದ ಅಧಿಕಾರಿಗಳಿಗೆ ಹೊಣೆಗಾರಿಕೆಗಳನ್ನು ವಹಿಸಲಾಗುವುದು. ಇಂಫಾಲ್ನಲ್ಲಿ ಮೈತೈ ಸಮುದಾಯಕ್ಕೆ ಬಹುಮತವಿದೆ. ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಕಿ-ಝೋ ಜನರನ್ನು ಹೊರಗಿನವರು ಎಂದು ಉಲ್ಲೇಖಿಸಿದ್ದಾರೆ ಎಂದು ಟಾಂಬಿಂಗ್ ಆರೋಪಿಸಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಭುಗಿಲೆದ್ದ ಮೇ 3ರಿಂದಲೂ ಐಟಿಎಲ್ಎಫ್ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜೊತೆ ಹಲವಾರು ಸುತ್ತುಗಳ ಮಾತುಕತೆ ನಡೆಸಿದೆಯಾದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ ಎಂದು ಹೇಳಿದ್ದಾರೆ.