ಬಂಗಾರಪೇಟೆ-ವಿಕೋಟೆ ರಸ್ತೆ ಕಾಮಗಾರಿಗೆ ಅಡ್ಡಿಯಾದ ಮರಗಳ ತೆರವಿಗೆ: ಶೀಘ್ರ ಅನುಮತಿ ನೀಡಲು ಡಿಸಿಎಫ್ ಜತೆ ಶಾಸಕಿ ರೂಪಕಲಾ ಶಶಿಧರ್ ಚರ್ಚೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಬಂಗಾರಪೇಟೆಯಿಂದ ಬೇತಮಂಗಲದ ಮೂಲಕ ವಿಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅಡ್ಡಿಯಾಗಿರುವ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡುವ ಕುರಿತು ಶಾಸಕಿ ರೂಪಕಲಾ ಶಶಿಧರ್ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರೊಂದಿಗೆ ಚರ್ಚಿಸಿದರು.
ನಗರದ ಅರಣ್ಯ ಇಲಾಖೆಯ ಡಿಸಿಎಫ್ ಅವರ ಕಚೇರಿಗೆ ಹೆದ್ದಾರಿ ಅಭಿವೃದ್ದಿ ಇಲಾಖೆ ಅಧಿಕಾರಿಗಳು,ಗುತ್ತಿಗೆದಾರರೊಂದಿಗೆ ಆಗಮಿಸಿದ ಶಾಸಕರು ಬೇತಮಂಗಲ ಮಾರ್ಗವಾಗಿ ವಿಕೋಟೆಗೆ ಹೋಗುವ ರಸ್ತೆ ಅಭಿವೃದ್ದಿಯ ಉಳಿಕೆ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಬೇಕಾಗಿದೆ ಎಂದು ಗಮನಕ್ಕೆ ತಂದರು.
ಇದೀಗ ಬಾಕಿ ಇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದುವರೆಸಲು ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಬೇಕಾಗಿದೆ, ಈ ಕಾರ್ಯ ಶೀಘ್ರವಾಗಿ ಮುಗಿದರೆ ಮಾತ್ರ ಮಳೆಗಾಲಕ್ಕೆ ಮುನ್ನಾ ರಸ್ತೆ ಅಭಿವೃದ್ದಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಇದು ಕೆಜಿಎಫ್ ಕ್ಷೇತ್ರದಲ್ಲಿನ ಅತಿ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ, ಸಾರ್ವಜನಿಕರು ಓಡಾಡಲು, ರೈತರು ತೋಟಗಾರಿಕಾ ಉತ್ಪನ್ನಗಳು, ರೇಷ್ಮೆ ಗೂಡು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆ ಕಾಮಗಾರಿ ಅತಿ ಮುಖ್ಯವಾಗಿದ್ದು, ಅತಿಶೀಘ್ರ ಮುಗಿಸುವ ಮೂಲಕ ಸಾರ್ವಜನಿಕರ ಸೇವೆಗೆ ಒದಗಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿಗಾಗಿ
392 ಮರ ತೆರವು
ಸದರಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಈ ರಸ್ತೆಯ ಬದಿಗಳಲ್ಲಿ ಇರುವ ಒಟ್ಟು ಸುಮಾರು 392 ಮರಗಳನ್ನು ತೆರವುಗೊಳಿಸಬೇಕಾಗಿದ್ದು ನಿಯಮಾವಳಿ ಪ್ರಕಾರ ಕಾಮಗಾರಿಯ ಹೊಣೆಹೊತ್ತ ಇಲಾಖೆಯವರು ಹಣ ಠೇವಣಿ ಮಾಡಿದರೆ ಅರಣ್ಯ ಇಲಾಖೆಯವರು ಟೆಂಡರ್ ಕರೆದು ಮರ ಕಟಾವು ಮಾಡಬೇಕು ಎಂಬುದಾಗಿದೆ ಎಂದು ತಿಳಿಸಿದರು.
ಆದರೆ ಈ ಎಲ್ಲಾ ಪ್ರಕ್ರಿಯೆ ಮುಗಿಸಲು ಹೆಚ್ಚಿನ ಸಮಯವಾಗುವುದರಿಂದ ಸದರಿ ಪ್ರಕ್ರಿಯೆ ವಿಳಂಬವಾಗುವ ಕಾರಣ ಮರು ಅರಣ್ಯೀಕರಣ ಠೇವಣಿ ಪಡೆದು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೆ ಮರಗಳನ್ನು ತೆರವುಗೊಳಿಸಲು ಅನುಮತಿ ಮಾಡಿಕೊಡುವುದಾಗಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತಂದರು.
ಶಾಸಕರ ಮನವಿಗೆ ಕೂಡಲೇ ಸ್ಪಂದಿಸಿದ ಡಿಸಿಎಫ್ ಅವರು ನೀಡಿದ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ ಅವರು ಒಪ್ಪಿ ಠೇವಣಿ ಪಾವತಿಸಿ ಇಲಾಖೆಯಿಂದಲೇ ಮರಗಳನ್ನು ತೆರವುಗೊಳಿಸುವುದಾಗಿ ಒಪ್ಪಿದರು.
ಶಾಸಕಿ ರೂಪಕಲಾ ಅವರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ಮರಗಳ ಹರಾಜು ಮತ್ತಿತರ ಪ್ರಕ್ರಿಯೆಗಳನ್ನು ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಲು ಡಿ.ಸಿ.ಎಫ್. ರವರನ್ನು ಕೋರಿದರಲ್ಲದೇ, ಡಿಸಿಎಫ್ ಅವರ ಪ್ರಸ್ತಾವನೆಯಂತೆ ಕೂಡಲೆ ಠೇವಣಿ ಪಾವತಿಸಲು ರಾ.ಹೆ. ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿ ಮರಗಳನ್ನು ತೆರವುಗೊಳಿಸುವ ಕಾಮಗಾರಿ ಆದಷ್ಟು ಬೇಗ ಪ್ರಾರಂಭಿಸಲು ಸೂಚಿಸಿದರು.
ಮರಗಳು ತೆರವುಗೊಳಿಸುವವರೆಗೆ ತೀರ ಹಾಳಾಗಿರುವ ಕಡೆ ಸಾರ್ವಜನಿಕರು ಸುಗಮವಾಗಿ ಓಡಾಡುವಂತಾಗಲು ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಳಿಸಲು ಈ ಸಂದರ್ಭದಲ್ಲಿ ಹಾಜರಿದ್ದ ಗುತ್ತಿಗೆದಾರ ಭಾಸ್ಕರ್ ನಾಯಡು ರವರಿಗೆ ಶಾಸಕರು ಸೂಚಿಸಿದರು.