

ಕುಂದಾಪುರ,ಅ. 27: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಸ್ತ್ರೀ ಆಯೋಗದ ಸಹಕಾರದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ 25/08/2024 ರಂದು ತರಭೇತಿ ಕಾರ್ಯಾಗಾರ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಯಾಸಿಸ್ ನ ಸಂಪದ ಸಂಬಂಧ ಸಂಸ್ಥೆಯ ಸಂಯೋಜಕರಾದ ಶ್ರೀ ಸ್ಟೇನ್ಲಿ ಫೆರ್ನಾಂಡಿಸ್ ರವರು ಹಾಜರಿದ್ದು, ಮಹಿಳೆಯರು ಚರ್ಚಿನಲ್ಲಿ ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸ್ವ ಇಚ್ಛೆಯಿಂದ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಂಘದ ಘಟನಾವಳಿ ಪ್ರಕಾರ ಒಬ್ಬರು ಇನ್ನೊಬ್ಬರ ಸುಖ ದುಃಖದಲ್ಲಿ ಪಾಲ್ಗೊಂಡು ಘಟಕದ ಸ್ವ ಸಹಾಯ ಸಂಘವನ್ನು ಸಕ್ರಿಯವಾಗಿ ಇಡಬೇಕು. ಸಂಘದ ಸದಸ್ಯರು ತಮ್ಮ ಸಂಸಾರದ ಜವಾಬ್ದಾರಿಯ ಜೊತೆ ಜೊತೆಗೆ ಸ್ವಲ್ಪ ಸಮಯ ತ್ಯಾಗಮಾಡಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿ ಸಂಘಗಳನ್ನು ಬಲ ಪಡಿಸುವುದರ ಮೂಲಕ ಸಮಾಜಕ್ಕೆ ಅಭೂತ ಪೂರ್ವ ಕೊಡುಗೆ ನೀಡುವಂತಾಗಬೇಕು ಎಂದು ತಿಳಿಸಿದರು.
ನಂತರ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾದರ್ ಎಡ್ವಿನ್ ಡಿಸೋಜಾರವರು ಮಾತನಾಡಿ, ಘಟಕದ ಮಹಿಳೆಯರು ಸಮಾಜದ ಕಾಳಜಿ, ಸಂಘದ ಸದಸ್ಯರ ಕಾಳಜಿ, ಇಡೀ ಸಮುದಾಯದ ಕಾಳಜಿ ಹೊಂದಿದ್ದು ತಾನು ಪಂಗಡದ ಸದಸ್ಯಳಾಗಿ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತಿರಬೇಕು. ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಪ್ರತಿ ಘಟಕದವರು ಒಂದು ಕಡೆ ಜೊತೆಸೇರಿ ಘಟಕದ ಆಗು ಹೋಗುಗಳ ಬಗ್ಗೆ ವಿಚಾರ ವಿನಿಮಯ ನಡೆಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಸ್ತ್ರೀ ಸ್ವ ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಫೆರ್ನಾಂಡಿಸ್,ಕಾರ್ಯದರ್ಶಿ ಏವ್ಲಿನ್ ಫೆರ್ನಾಂಡಿಸ್,ಕುಂದಾಪುರ ವಲಯದ ಸಂಚಾಲಕಿ ಶ್ರೀಮತಿ ಸಿಂತಿಯಾ ರೋಡ್ರಿಗಸ್, ತಲ್ಲೂರು ಘಟಕದ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಎಲ್ಲಾ ಪಾಧಾಧಿಕಾರಿಗಳು ಹಾಜರಿದ್ದರು.ಸುಮಾರು 60 ಮಹಿಳೆಯರು ಈ ಕಾರ್ಯಗಾರದ ಪ್ರಯೋಜನವನ್ನು ಪಡೆದರು.
ಕುಮಾರಿ ಕ್ಯಾರೋಲ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಚರ್ಚಿನ ಧರ್ಮ ಗುರುಗಳು ವಂದಿಸಿದರು.












