ಕೋಲಾರ:- ತಾಲ್ಲೂಕಿನ 18 ಕೇಂದ್ರಗಳಲ್ಲಿ ಮಾ.25 ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 5029 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಕೊಠಡಿ ಮೇಲ್ವಿಚಾರಕರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಗಮ ಪರೀಕ್ಷೆ ನಡೆಸಿಕೊಡಿ ಎಂದು ತಾಲ್ಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ ಕಿವಿಮಾತು ಹೇಳಿದರು.
ನಗರದ ಅಲ್ಅಮೀನ್ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೇಮಕಗೊಂಡ ಕೊಠಡಿ ಮೇಲ್ವಿಚಾರಕರಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕುರಿತು ಬಿಇಒ ಎಸ್.ಎನ್.ಕನ್ನಯ್ಯ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪರೀಕ್ಷಾ ಕಾರ್ಯಕ್ಕಾಗಿ 400 ಮಂದಿ ಕೊಠಡಿಮೇಲ್ವಿಚಾರಕರನ್ನು ನೇಮಿಸಿದ್ದು, ಮುಖ್ಯ ಅಧೀಕ್ಷರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ನಿಮಗೆ ವಹಿಸಿರುವ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿ ಎಂದು ತಾಕೀತು ಮಾಡಿದರು.
ಪರೀಕ್ಷಾ ಕೇಂದ್ರಕ್ಕೆ ಕೊಠಡಿ ಮೇಲ್ವಿಚಾರಕರು ನಿಗಧಿತ ಸಮಯಕ್ಕೆ ಹಾಜರಾಗುವ ಮೂಲಕ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದ ಅವರು, ಮೊಬೈಲ್ ಬಳಕೆಗೆ ಅವಕಾಶವಿಲ್ಲ, ನೀವು ಮೊಬೈಲ್ ತಂದರೂ ಅದನ್ನು ಸ್ವಿಚ್ ಆಫ್ ಮಾಡಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ನೇಮಕಗೊಂಡಿರುವ ಮೊಬೈಲ್ ಸ್ವಾಧೀನಾಧಿಕಾರಿ ಜವಾಬ್ದಾರಿಗೆ ನೀಡಬೇಕು ಎಂದು ತಿಳಿಸಿದರು.
ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸಿ ಎಂದ ಅವರು, ಉತ್ತರ ಪತ್ರಿಕೆ ವಿತರಿಸುವಾಗ ಅತಿ ಎಚ್ಚರಿಕೆ ವಹಿಸಿ, ಹರಿದ, ಮುಖಪುಟವಿಲ್ಲದ ಉತ್ತರ ಪತ್ರಿಕೆ ಬಂದಿದ್ದರೆ ಮಕ್ಕಳಿಂದ ವಾಪಸ್ಸು ಪಡೆಯಿರಿ, ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಬುಕ್ಲೆಟ್ 24 ಪುಟಗಳಿದ್ದು, ಗಣಿತದ ಬುಕ್ಲೆಟ್ ಮಾತ್ರ 36 ಪುಟ ಹಾಗೂ ಜತೆಗೆ ಗ್ರಾಫ್ಶೀಟ್ ಇರುತ್ತದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಹತ್ತಾರು ಶಾಲೆಗಳ ಮಕ್ಕಳು ಪರೀಕ್ಷೆಗೆ ಬರುವುದರಿಂದ ಕನ್ನಡ,ಇಂಗ್ಲೀಷ್, ಉರ್ದು ಮಾಧ್ಯಮದ ಕುರಿತು ಹಾಗೂ ಪ್ರಥಮ ಭಾಷೆ,ದ್ವಿತೀಯ ಭಾಷೆ, ತೃತೀಯ ಭಾಷೆ ಯಾವುದನ್ನು ಮಕ್ಕಳು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದರು.
ಪರೀಕ್ಷಾ ಪ್ರವೇಶಪತ್ರದ ಮೇಲೆ ವಿಷಯದ ಮುಂದೆ ನಿಮ್ಮ ಸಹಿ ಹಾಕುವುದನ್ನು ಮರೆಯದಿರಿ, 10-30ಕ್ಕೆ ಮಕ್ಕಳಿಗೆ ಪ್ರಶ್ನೆಪತ್ರಿಕೆ ನೀಡಿ 10-45 ರವರೆಗೂ ಓದಲು ಅವಕಾಶವಿದೆ ನಂತರ ಬರೆಯಲು ಆರಂಭಿಸಲಿ ಎಂದ ಅವರು, 10-45ರ ನಂತರ ತಡವಾಗಿ ಪರೀಕ್ಷೆಗೆ ಬರಲು ಅವಕಾಶವಿಲ್ಲ ಎಂದು ತಿಳಿಸಿ, 10-45ಕ್ಕೆ ಗೈರು ಹಾಜರಿ ಮಾಹಿತಿ ಕಳುಹಿಸಿಕೊಡಿ ಎಂದರು.
ಪರೀಕ್ಷೆಯಲ್ಲಿ ನಕಲು ತಡೆಯಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರವೇಶಪತ್ರ, ನಾಮಿನಲ್ ರೊಲ್ ನಡುವೆ ಫೋಟೊ,ಸಹಿಯ ತಾಳೆ ಮಾಡಿನೋಡಿ ಎಂದು ಸಲಹೆ ನೀಡಿ, ಉತ್ತರ ಪತ್ರಿಕೆಯ ಮೇಲುಪುಟದಲ್ಲಿ ಕೇಳಿರುವ ನೋಂದಣಿ ಸಂಖ್ಯೆ ಸೇರಿದಂತೆ ಮಾಹಿತಿ ತುಂಬಲು ತಿಳಿಸಿ, ಉತ್ತರ ಬರೆದ ನಂತರ ಕೊನೆಯಲ್ಲಿ ಎಷ್ಟು ಪುಟ ಬರೆದಿದ್ದಾರೆ ಎಂದು ನಮೂದಿಸಿ, ಅಂತಿಮ ಬೆಲ್ ನಂತರ ಕೊಠಡಿ ಬಾಗಿಲು ಮುಚ್ಚಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಗೊಂದಲ ಸೃಷ್ಟಿಸದಿರಿ-ವೇಣು
ಸುಭಾಷ್ ಶಾಲೆ ಮುಖ್ಯಶಿಕ್ಷಕ ಹಾಗೂ ಹಾಗೂ ಸಂಪನ್ಮೂಲ ವ್ಯಕ್ತಿ ವೇಣುಗೋಪಾಲ್ ಮಾತನಾಡಿ, ನಕಲು ಮಾಡಲು ಅವಕಾಶ ನೀಡದೇ ಬದ್ದತೆಯಿಂದ ಕೆಲಸ ಮಾಡಿ ಎಂದ ಅವರು, ಕೊಠಡಿಮೇಲ್ವಿಚಾರಕರು ಪಕ್ಕದ ಕೊಠಡಿಯ ಶಿಕ್ಷಕರೊಂದಿಗೆ ಸಂಭಾಷಣೆ ಮಾಡುವುದು ನಿಷಿದ್ದವಾಗಿದೆ. ವಿಕಲಚೇತನ ಮಕ್ಕಳ ಉತ್ತರ ಪತ್ರಿಕೆಗಳಿಗೆ ಹಸಿರು ಸ್ಟಿಕ್ಕರ್ ಹಾಕುವುದು ಮರೆಯದಿರಿ ಎಂದರು.
ಕೊಠಡಿಯಲ್ಲಿ 24ಕ್ಕಿಂತ ಹೆಚ್ಚಿನ ಮಕ್ಕಳು ಕೂರಿಸಬಾರದು, ಗಾಳಿ,ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಇದೆಯೇ ಎಂಬುದನ್ನು ಗಮನಿಸಿಕೊಳ್ಳಿ, ಪ್ರಶ್ನೆಪತ್ರಿಕೆ ವಿತರಿಸುವಾಗ ಎ.ಬಿ. ಬಿ1 ವರಷನ್, ಹೊಸ ಅಭ್ಯರ್ಥಿಗಳು, ಪುನರಾವರ್ತಿತ, ಖಾಸಗಿ ಪುನರಾವರ್ತಿತ ಮತ್ತಿತರ ಅಂಶಗಳನ್ನು ಗಮನಿಸಿ ಎಂದು ಸೂಚಿಸಿದರು.
ಮಕ್ಕಳಿಗೆ ಉತ್ತರ ಪತ್ರಿಕೆಯ ಮುಖಪುಟ ತುಂಬಲು ಮಾರ್ಗದರ್ಶನ ನೀಡಿ ಎಂದ ಅವರು, ವಿನಾಕಾರಣ ಕೊಠಡಿಯಲ್ಲಿ ತಿರುಗಾಡುವುದು, ಮಕ್ಕಳನ್ನು ಮಾತನಾಡಿಸಿ ಅವರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುವಂತಿಲ್ಲ, ನಿಮ್ಮಲ್ಲಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ಬದ್ದತೆ ಇರಬೇಕು ಎಂದರು.
ಕೇಂದ್ರಕ್ಕೆ ಬರುವ ಕೊಠಡಿಮೇಲ್ವಿಚಾರಕರು, ಗುಮಾಸ್ತರು, ಡಿ ಗ್ರೂಪ್ ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಅಧಿಕೃತ ಗುರುತಿನ ಚೀಟಿ ಇಲ್ಲದ ಅನಧಿಕೃತ ವ್ಯಕ್ತಿಗಳಿಗೆ ಕೇಂದ್ರ ಮತ್ತು ಕೊಠಡಿಗೆ ಪ್ರವೇಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಕೋಲಾರ ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ಚಿಚಾರಕರಾಗಿ ನೇಮಕಗೊಂಡಿರುವ ಶಿಕ್ಷಕರು ತರಬೇತಿಯಲ್ಲಿ ಹಾಜರಿದ್ದರು.