ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೃಷಿ ವಿಜ್ಞಾನ ಕೇಂದ್ರ ಕೋಲಾರ ಹಾಗೂ ತೋಟಗಾರಿಕೆ ಇಲಾಖೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ನರ್ಸರಿ ಉತ್ಪಾದಕರಿಗೆ “ಆಲೂಗಡ್ಡೆ ಸಸಿಗಳಿಂದ ಬೀಜೋತ್ಪಾದನೆ” ಎಂಬ ತರಬೇತಿ ಕಾರ್ಯಕ್ರಮವನ್ನು ದಿನಾಂಕ 17.7.2021 ರಂದು ಕೃಷಿ ವಿಜ್ಞಾನ ಕೇಂದ್ರ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಡಾ.ಜ್ಯೋತಿ ಕಟ್ಟೆಗೌಡರ, ವಿಜ್ಞಾನಿ (ತೋಟಗಾರಿಕೆ), ಕೃಷಿ ವಿಜ್ಞಾನ ಕೇಂದ್ರ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಸಹಭಾಗಿತ್ವದಲ್ಲಿ ಚಿಗುರು ಕಾಂಡ ಸಸಿಗಳನ್ನು ಬಳಸಿಕೊಂಡು ಬೀಜೋತ್ಪಾದನೆ ಮಾಡುವುದರ ಬಗ್ಗೆ ಸಂಶೋಧನೆ ನಡೆದಿದೆ ಈ ತಂತ್ರಜ್ಞಾನದ ಅರಿವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ ನರ್ಸರಿ ಉತ್ಪಾದಕರಿಗೆ ತಲುಪಿಸುವುದೇ ಈ ತರಬೇತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಡಾ. ವಿಷ್ಣುವರ್ಧನ, ಸಹ ಸಂಶೋಧನಾ ನಿರ್ದೇಶಕರು ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರುರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ಆಲೂಗಡ್ಡೆ ಒಂದು ಪ್ರಮುಖ ತರಕಾರಿ ಬೆಳೆಯಾಗಿದ್ದು ಬಿತ್ತನೆ ಗಡ್ಡೆಗಳಿಗೆ ಪಂಜಾಬ್ ರಾಜ್ಯವನ್ನೇ ಅವಲಂಬಿಸಬೇಕಿದೆ. ರಾಜ್ಯದ ಧಾರವಾಡ, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂಗಾರಿನಲ್ಲಿ ಬೆಳೆಯುತ್ತಾರೆ. ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ಹಿಂಗಾರಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇತ್ತೀಚೆಗೆ ಆಲೂಗಡ್ಡೆ ಬೆಳೆಯ ಪ್ರದೇಶ 72,000 ಹೆಕ್ಟೇರನಿಂದ 30,000 ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ. ಇದಕ್ಕೆ ಕಾರಣ ದುಬಾರಿ ಬಿತ್ತನೆ ಗಡ್ಡೆ, ಸಾರಿಗೆ ವೆಚ್ಚ ಹಾಗೂ ನಂಜಾಣುರೋಗಗಳಾಗಿವೆ.
2030ರ ಹೊತ್ತಿಗೆ ಭಾರತದ ಆಲೂಗಡ್ಡೆ ಬೇಡಿಕೆ 65 ದಶಲಕ್ಷ ಟನ್ ಮುಟ್ಟುವ ಅಂದಾಜಿದೆ. ಕೇವಲ ತೋಟಗಾರಿಕೆ ಇಲಾಖೆ ಹಾಗೂ ವಿಶ್ವವಿದ್ಯಾಲಯದಿಂದ ಇμÉ್ಟೂಂದು ಬೇಡಿಕೆಯನ್ನು ಸಾಧಿಸಲು ಆಗುವುದಿಲ್ಲ ಆದ್ದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ನರ್ಸರಿ ಉತ್ಪಾದಕರ ಸಹಾಯದಿಂದ ಹೆಚ್ಚು ಹೆಚ್ಚು ಚಿಗುರು ಕಾಂಡ ಸಸಿಗಳನ್ನು ಬೆಳೆಸಿ ಜಿ-0 ಬಿತ್ತನೆ ಗಡ್ಡೆಗಳನ್ನು ಉತ್ಪಾದಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಚಿಗುರು ಕಾಂಡ ಸಸಿಗಳು ರೋಗಮುಕ್ತವಾಗಿರುತ್ತವೆ. ಈ ತಾಂತ್ರಿಕತೆಯನ್ನು ಬಳಸಿಕೊಂಡು ಈಗಾಗಲೇ ಮಾಲೂರಿನಲ್ಲಿ ಚಿಗುರುಕಾಂಡ ಸಸಿಗಳ ನರ್ಸರಿಯನ್ನು ಮಾಡಲಾಗುತ್ತಿದೆ. ಹೊರ ರಾಜ್ಯಗಳಲ್ಲೂ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ತಾಂತ್ರಿಕತೆಯನ್ನು ಬಳಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗಾಯತ್ರಿ ಎಮ್ ರವರು ಮಾತನಾಡಿ ಈಗಾಗಲೇ ಬೆಳೆಯುತ್ತಿರುವ ಆಲೂಗಡ್ಡೆ ಹಾಗೂ ಚಿಗುರು ಕಾಂಡ ಸಸಿಗಳ ಮೂಲಕ ಬೆಳೆದ ಬಿತ್ತನೆ ಗಡ್ಡೆಗಳ ಉತ್ಪಾದನಾ ತಾಂತ್ರಿಕತೆ ಭಿನ್ನವಾಗಿರುವುದಿಲ್ಲ. ಆದುದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ನರ್ಸರಿ ಉತ್ಪಾದಕರು ಈ ಚಿಗುರು ಕಾಂಡ ಸಸಿಗಳ ತಾಂತ್ರಿಕತೆಯನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ರೋಗಮುಕ್ತ ಬಿತ್ತನೆ ಆಲೂಗಡ್ಡೆಯನ್ನು ಬೆಳೆದು ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಕೆ ತುಳಸಿರಾಮ ರವರು ಮಾತನಾಡಿ ಹೊಸ ತಂತ್ರಜ್ಞಾನವಾದ ಚಿಗುರು ಕಾಂಡ ಸಸಿಗಳನ್ನು ನಮ್ಮ ಜಿಲ್ಲೆಯ ರೈತರಿಗೆ ಪರಿಚಯ ಮಾಡಿಕೊಡಬೇಕೆಂದು ಆಶಿಸಿದರು. ತಾಂತ್ರಿಕ ಅಧಿವೇಶನದಲ್ಲಿ ಡಾ. ವಿಷ್ಣುವರ್ಧನ್ ಸಹ ಸಂಶೋಧನಾ ನಿರ್ದೇಶಕರು ಅಂಗಾಂಶ ಕೃಷಿಯಿಂದ ಆಲೂಗಡ್ಡೆ ಬೀಜೋತ್ಪಾದನೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಡಾ. ಅಮೃತ ಭಟ್, ಸಹಾಯಕ ಪ್ರಾಧ್ಯಾಪಕರು, ಸಸ್ಯ ಸಂರಕ್ಷಣೆ ಇವರು ಆಲೂಗಡ್ಡೆ ಬೆಳೆಯಲ್ಲಿ ರೋಗದ ಸಮಗ್ರ ನಿರ್ವಹಣೆ ಬಗ್ಗೆ ವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರುಗಳು, ತೋಟಗಾರಿಕೆ ಅಧಿಕಾರಿಗಳು ಹಾಗೂ ನರ್ಸರಿ ಉತ್ಪಾದಕರು ಸೇರಿ ಒಟ್ಟು 60 ಜನ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಜೊತೆಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.