ಶ್ರೀನಿವಾಸಪುರ ಮೇ-20 : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಮಾವಿಗೆ ಹೆಸರುವಾಸಿಯಾಗಿದೆ ಆದ್ದರಿಂದ ರೈತರು, ವರ್ತಕರು ಸಮನ್ವಯತೆಯಿಂದ ನಡೆದುಕೊಂಡು ಯಾವುದೇ ಅಡಚಣೆಗಳಿಲ್ಲದೆ ಮಾವಿನ ಸುಗ್ಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸೂಚಿಸಿದರು.
ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾರ್ಷಿಕ ಬೆಳೆ ಮಾವಿನ ಸುಗ್ಗಿ ಪ್ರಾರಂಭವಾಗಿದೆ ವರ್ತಕರು ರೈತರಿಗೆ ಯಾವುದೇ ತೊಂದರೆಯಾಗದಂತೆ ಪಾರದರ್ಶಕತೆಯನ್ನು ಕಾಪಾಡಬೇಕು ಕಾರ್ಮಿಕರಿಗೆ ಅಗತ್ಯವಾದ ಶುದ್ದ ಕುಡಿಯುವ ನೀರು, ವಿಶ್ರಾಂತಿಧಾಮ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಕಾರ್ಯದರ್ಶಿ ಉಮಾರವರಿಗೆ ಸೂಚಿಸಿದರು. ಪೊಲೀಸ್ ಇಲಾಖೆಯವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಜೊತೆಗೆ ಮುಖ್ಯರಸ್ತೆಯಲ್ಲಿ ನಿಲ್ಲಿಸುವ ಬೃಹತ್ ವಾಹನಗಳು ತೆರವುಗೊಳಿಸಲು ಪೊಲೀಸ್ ಇಲಾಖೆಯವರು ಗಮನ ಹರಿಸಬೇಕು, ಪ್ರಾಂಗಣದೊಳಗೆ ಮದ್ಯ ಮಾರಾಟ ನಿಲ್ಲಿಸಲು ಅಬಕಾರಿ ಇಲಾಖೆ ಕಾರ್ಯೋನ್ಮುಕರಾಗಬೇಕು ಎಂದ ಅವರು ಅಗತ್ಯವಿರುವ ರಸ್ತೆ, ಚರಂಡಿ ಕಾಮಗಾರಿಯನ್ನು ನಡೆಸಲು ಕ್ರಿಯಾಯೋಜನೆ ತಯಾರಿಸಿ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾವು ಬೆಳೆಗಾರರ ಅಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ ಸರಿಸುಮಾರು 150 ಮಂಡಿಗಳು ಇರುವ ಪ್ರಾಂಗಣದಲ್ಲಿ ಹಲವಾರು ಕುಂದುಕೊರತೆಗಳು ಜೀವಂತವಾಗಿದ್ದಾವೆ ಅದನ್ನು ಸರಿಪಡಿಸಲು ಕರೆದಿರುವ ಸಭೆಗೆ ಹಲವಾರು ಮಂಡಿ ಮಾಲೀಕರು ಬಾರದೆ ಇರುವುದು ಬೇಸರದ ಸಂಗತಿ, ಎ.ಪಿ.ಎಂ.ಸಿ. ಕಾಯ್ದೆಯ ಪ್ರಕಾರ ಕಮೀಷನ್ ಪಡೆಯಬಾರದು ಹಾಗೂ ಮಂಡಿ ಮಾಲೀಕರು ತ್ಯಾಜ್ಯವನ್ನು ರಸ್ತೆಬದಿ ಹಾಕಬಾರದು ಎಂದು ವರ್ತಕರ ಗಮನಕ್ಕೆ ತಂದರು.
ಎ.ಪಿ.ಎಂ.ಸಿ. ಕಾರ್ಯದರ್ಶಿ ಉಮಾ ಮಾತನಾಡಿ ಸಮಿತಿಗೆ ಬರುವ ಆದಾಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ 2015ನೇ ಸಾಲಿನಲ್ಲಿ ಸಮಿತಿ ಮಾಡಿರುವ ಸಾಲಕ್ಕೆ ಬಡ್ಡಿ ತೀರಿಸಲು ಆಗದ ಕಾರಣ ಶಾಸಕರು ಪ್ರಾಂಗಣಕ್ಕೆ ಅಗತ್ಯವಿರುವ ರಸ್ತೆ, ಚರಂಡಿ, ಕಾಂಪೌಂಡ್ ನಿರ್ಮಾಣ, ಶುದ್ದ ನೀರಿನ ಘಟಕ ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ಸ್ಥಳಾವಕಾಶವನ್ನು ನೀಡಬೇಕು ಎಂದು ಕೋರಿದರು.
ಈ ಸಂಧರ್ಭದಲ್ಲಿ ಜಿಲ್ಲ ಪಂಚಾಯ್ತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಅಕ್ಬರ್ ಷರೀಫ್, ಎ.ಪಿ.ಎಂ.ಸಿ. ಮಾಜಿ ನಿರ್ದೇಶಕರಾದ ಅಥಾವುಲ್ಲ, ಅನೀಸ್ ಅಹಮದ್, ನಾರಾಯಣಸ್ವಾಮಿ, ಪಿ.ಎಸ್.ಐ. ರಾಮಚಂದ್ರಯ್ಯ ಇತರರು ಇದ್ದರು.