JANANUDI.COM NETWORK
ತಿರುವನಂತಪುರ;ಕೇರಳದ ಕೊಲ್ಲಂ ಜಿಲ್ಲೆಯೊಂದರಲ್ಲಿ ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಜ್ವರದ ವೈರಸ್ ಕಂಡು ಬಂದಿದೆ. ಈ ವೈರಸ್ ಗೆ ತುತ್ತಾದ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕೊರೊನಾ ಎಂಬ ಹೆಮ್ಮಾರಿಯ ಆರ್ಭಟದ ಮಧ್ಯೆ ಕೇರಳದಲ್ಲಿ ಹೊಸ ಟೊಮೇಟೋ ಸೋಂಕು ಜನರಲ್ಲಿ ಭೀತಿಯುಂಟು ಮಾಡಿದೆ.ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಈ ಜ್ವರ ಸಾಂಕ್ರಾಮಿಕ ರೋಗ ಆದುದರಿಂದ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ. ಟೊಮೇಟೊ ಜ್ವರ ಇದೊಂದು ಅಪರೂಪದ ವೈರಲ್ ಸೋಂಕು ಆಗಿದ್ದು, ಈ ಜ್ವರದಲ್ಲಿ ಬಳಲುತ್ತಿರುವ ಮಕ್ಕಳಲ್ಲಿ ಕೆಂಪು ಗುಳ್ಳೆ ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ.
ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.