ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು ಜೋರು 15 ಕೆಜಿ ಟೊಮೆಟೊ ಬಾಕ್ಸಿಗೆ ರೂ.1800 ರಿಂದ ರೂ.2000

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮೆಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೆಟೊ ಬಾಕ್ಸೊಂದು ರೂ.1800 ರಿಂದ ರೂ.2000 ದವರೆಗೆ ಮಾರಾಟವಾಯಿತು.
ಮಾರುಕಟ್ಟೆಗೆ ಟೊಮೆಟೊ ತಂದಿದ್ದ ರೈತರು ಬೆಲೆಯಿಂದ ಹರ್ಷಚಿತ್ತರಾಗಿದ್ದರು. ಆದರೆ ಮುದುಡು ರೋಗದಿಂದ ಇಳುವರಿ ಕುಸಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
‘1 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಪ್ರಾರಂಭದಲ್ಲಿ 60 ಬಾಕ್ಸ್ ಸಿಕ್ಕಿದೆ. ಒಳ್ಳೆ ಬೆಲೆ ಬಂದಿದೆ. ತೋಟ ರೋಗಪೀಡತವಾಗದೆ ಇದ್ದಲ್ಲಿ, ಈ ಹಿಂದೆ ಬೆಲೆ ಕುಸಿತದಿಂದ ಕಳೆದುಕೊಂಡಿದ್ದ ಬಂಡವಾಳ ವಾಪಸ್ ಬರುತ್ತಿತ್ತು. ಸಧ್ಯ ಇಷ್ಟಾದರೂ ಸಿಗುತ್ತಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು’ ಎಂದು ಕೂಳಗುರ್ಕಿ ಗ್ರಾಮದ ಟೊಮೆಟೊ ಬೆಳೆಗಾರ ರಾಮಾಂಜಿಲಪ್ಪ ಹೇಳಿದರು.
‘ಗಿಡಕ್ಕೆ ಮುದುಡು ರೋಗ ಬಂದ ಪರಿಣಾಮವಾಗಿ ಮಾರುಕಟ್ಟೆಗೆ ಸಾಕಷ್ಟು ಟೊಮೆಟೊ ಬರುತ್ತಿಲ್ಲ. ತಾಲ್ಲೂಕಿನ ಉತ್ತರ ಭಾಗದ ರೈತರು ತಾವು ಬೆಳೆದ ಟೊಮೆಟೊ ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಹಾಗಾಗಿ ಕಡಿಮೆ ಸಂಖ್ಯೆಯ ಬಾಕ್ಸ್‍ಗಳು ಬರುತ್ತಿವೆ. ಆದರೂ ಬೆಲೆ ಬಂದಿರುವುದರಿಂದ ರೈತರು ಬಚಾವಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚುವ ಸಂಭವಿ ಇದೆ’ ಮಂಡಿ ಮಾಲೀಕ ಕೆ.ಸಿ.ವರದರಾಜು ಪ್ರಜಾವಾಣಿಗೆ ತಿಳಿಸಿದರು.