ಟೋಕಿಯೊ ಒಲಿಂಪಿಕ್ಸ್: ಹಾಕಿಯಲ್ಲಿ ಕಂಚು ಗೆದ್ದ ಪುರುಷರ ತಂಡ- 41 ವರ್ಷಗಳ ಬಳಿಕ ಹಾಕಿಯಲ್ಲಿ ಭಾರತಕ್ಕೆ ಪದಕ

JANANUDI.COM NETWORK

ಟೋಕಿಯೋ,ಆ.5: ಭಾರತೀಯ ಹಾಕಿ ಪುರುಷರ ತಂಡ ಇತಿಹಾಸ ನಿರ್ಮಿಸಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರು 5-4ರಿಂದ ಜರ್ಮನಿ ತಂಡವನ್ನು ಸೋಲಿಸಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ಲಭಿಸಿದೆ. ಆದರೆ ತಂಡ ಸ್ಪರ್ಧೆಯಲ್ಲಿ ಟೀಮ್ ಇಂಡಿಯಾಕ್ಕೆ ಲಭಿಸುತ್ತಿರುವ ಮೊದಲನೇ ಪದಕವಿದು. ಅಷ್ಟೇ ಅಲ್ಲ, ಸುಮಾರು 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡಕ್ಕೆ ಒಲಿಂಪಿಕ್ಸ್ನಲ್ಲಿ ಲಭಿಸುತ್ತಿರುವ ಮೊದಲನೇ ಕಂಚಿನ ಪದಕ ಇದಾಗಿದೆ.
ಹೌದು.. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ವಿಭಾಗದಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದ್ದು, ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಜಯಿಸಿದೆ. ಗೋಲುಗಳ ಸುರಿಮಳೆಯೇ ನಡೆದ ಪಂದ್ಯದಲ್ಲಿ ಜರ್ಮನಿ ತಂಡದ ವಿರೋಚಿತಿ ಪ್ರತಿರೋಧದ ಹೊರತಾಗಿಯೂ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಲು ನೆರವಾದರು. 41 ವರ್ಷಗಳ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸುತ್ತಲೇ ಭಾರತದ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು. ಯಾಕೆಂದರೆ ಭಾರತೀಯ ಹಾಕಿ ಪುರುಷರು ಬರೋಬ್ಬರಿ 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 3-1ರಿಂದ ಸೋಲಿಸುವ ಮೂಲಕ ಹಾಕಿ ಪುರುಷರು ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದರು
ಈ ಹಿಂದೆ 1980ರ ಮಾಸ್ಕೊ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ 41 ವರ್ಷಗಳ ಬಳಿಕ ಮತ್ತೆ ಪದಕ ಗೆದ್ದ ಮಹತ್ತರ ಸಾಧನೆ ಮಾಡಿದೆ.