ಟೋಕಿಯೊ ಒಲಂಪಿಕ್ಸ್ ಭಾರತಕ್ಕೆ ಮಹಿಳಾ ಬಾಕ್ಸಿಂಗನಲ್ಲಿ ಮತ್ತೊಂದು ಪದಕ ಖಚಿತ: ಸೆಮಿಫೈನಲ್​​​​​​ ಪ್ರವೇಶಿಸಿದ​ ಲೊವ್ಲಿನಾ

JANANUDI.COM NETWORK

ಟೋಕಿಯೊ:ಜು.3o; ಟೋಕಿಯೊ ಒಲಂಪಿಕ್ಸ್’ನ ಬಾಕ್ಸಿಂಗ್ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅವರನ್ನು ಸೋಲಿಸುವ ಮೂಲಕ ಭಾರತದ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದೆ.
ಟೋಕಿಯೊ ಒಲಂಪಿಕ್ಸ್ ಆರಂಭವಾಗಿ 7 ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕವನ್ನು ಗೆದ್ದಿರುವ ಏಕೈಕ ಆಟಗಾರ್ತಿ ಅಂದರೆ ಮೀರಾಬಾಯಿ ಚಾನು ಮಾತ್ರ.
ಪಿವಿ ಸಿಂಧು, ಅತನು ದಾಸ್ ಮತ್ತು ಭಾರತದ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇವರುಗಳ ಜೊತೆ ಇದೀಗ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶ ಮಾಡಿದ್ದು, ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದೆ.
ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದ ಎರಡನೇ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎನ್ ಸಿ ಚೆನ್ ವಿರುದ್ಧ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಲೊವ್ಲಿನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಲವ್ಲಿನಾ ಎದುರಾಳಿಗೆ ಭರ್ಜರಿ ಪಂಚ್ ನೀಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಸಫಲರಾದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವರು ಭಾರತ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

.