ಕೋಲಾರ ಪತ್ರಿಕಾ ದಿನಾಚರಣೆ – ಇಂದು ಮಾಧ್ಯಮಗಳು ಸಮರ್ಪಕವಾದ ಮಾಹಿತಿಗಳನ್ನು ನೀಡುವಲ್ಲಿ ವಿಫಲವಾಗಿವೆ:ಕುಲಪತಿ ನಿರಂಜನ ವಾನಳ್ಳಿ -ಸಾಧಕ ವಿದ್ಯಾರ್ಥಿಗಳಿಗೆ ಪತ್ರಕರ್ತ ಸಂಘದಿಂದ ಸನ್ಮಾನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಜು.1: ಇಂದು ಮಾಧ್ಯಮಗಳು ಸಮರ್ಪಕವಾದ ಮಾಹಿತಿಗಳನ್ನು ನೀಡುವಲ್ಲಿ ವಿಫಲವಾಗಿವೆ, ಪತ್ರಿಕೆಗಳು ವಿಡಂಬನಾತ್ಮಕತೆ, ಟೀಕೆ ಟಿಪ್ಪಣಿಗಳು ಆರೋಗ್ಯಕರವಾಗಿರಬೇಕು. ಮಾಹಿತಿಗಳಲ್ಲಿ ಸತ್ಯಾಂಶವಿರಬೇಕು ಮತ್ತು ಲೇಖನಗಳು ಮಾನಹಾನಿಯಾಗಿರಬಾರದು ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪತ್ರಿಕಾ ದಿನಾಚರಣೆಯನ್ನು ಜುಲೈ 1 ರಂದು ಆಚರಿಸುತ್ತಿರುವ ಸಂದರ್ಭದಲ್ಲಿ ನಾವು 1943ರಲ್ಲಿ ಮಂಗಳೂರು ಸಮಾಚಾರ್ ಕನ್ನಡ ವಾರಪತ್ರಿಕೆ ಪ್ರಪ್ರಥಮವಾಗಿ ಪ್ರಾರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರವನ್ನು ಹುಟ್ಟು ಹಾಕಿದ ಸಾಧನೆ ನೆನಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಕಲ್ಲಚ್ಚಿನ ಮುದ್ರಣವನ್ನು ಪ್ರಾರಂಭಿಸಿದ್ದು ನಂತರ ಅಚ್ಚುಮೊಳೆಗಳ ಮೂಲಕ ಮುದ್ರಣದ ಯುಗ ಅರಂಭವಾಯಿತು ಎಂದ ಅವರು 1988ರಲ್ಲಿ 145ನೇ ವರ್ಷದ ಆಚರಣೆಯನ್ನು ಮಂಗಳೂರಿನ ಕೆನರಾ ಶಾಲೆಯಲ್ಲಿ ಅಕಾಡೆಮಿ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಅವರು ಪ್ರಥಮವಾಗಿ ಪತ್ರಿಕಾ ದಿನಾಚರಣೆ ಆಚರಿಸಿದ ಕಾರ್ಯಕ್ರಮದಲ್ಲಿ ನಾನೇ ಉಪನ್ಯಾಸ ನೀಡಿದೆ ಎಂದು ಸ್ಮರಿಸಿದರು.
ಆಂಗ್ಲರ ಆಳ್ವಿಕೆ ಕಾಲದಲ್ಲಿ ಶಿಕ್ಷಣ ಇಲಾಖೆ,ಕೈಗಾರಿಕೆ,ವ್ಯಾಪಾರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಪತ್ರಿಕೋದ್ಯಮವು ಸುಮಾರು 50 ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕಂಡಿರಲಿಲ್ಲ ಹೆರ್ಮನ್ ಅವರು ಕನ್ನಡವನ್ನು ಕಲಿತು ಅಧ್ಯಯನ ಮಾಡಿ 1943ರಲ್ಲಿ ಪತ್ರಿಕೆ ಪ್ರಾರಂಭಿಸಿದಾಗ ಕನ್ನಡದ ಕುರಿತು ಕನ್ನಡದ ಮನೆಗೆ ಕಿಟಕಿ, ಬಾಗಿಲುಗಳು ಇಲ್ಲದ ಮನೆಯಾಗಿದೆ ಇದಕ್ಕೆ ನಾವುಗಳು ಕಿಟಕಿ ಬಾಗಿಲು ಇಡಬೇಕಾಗಿದೆ ಎಂದು ಹೇಳಿದ್ದನ್ನು ನೆನಪಿಸಿದರು.
ನವದೆಹಲಿಯ ಖ್ಯಾತ ಪತ್ರಕರ್ತ ಡಿ. ಉಮಾಪತಿ,ಸರ್ಕಾರವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ದವಾಗಿದೆ ಎಂದು ಹೇಳುತ್ತಿದ್ದರೂ, ಪತ್ರಿಕಾ ಸ್ವಾತಂತ್ರ್ಯದ ವಿರುದ್ದ ದಂಡ ಪ್ರಯೋಗ ತಪ್ಪುತ್ತಿಲ್ಲ, ಪತ್ರಿಕೆಗಳು ಸಮಾಜದಲ್ಲಿ ಕಾವಲು ನಾಯಿಗಳಾಗುವ ಬದಲಿಗೆ ಮುದ್ದಿನ ನಾಯಿಗಳಾಗುತ್ತಿವೆ ಮತ್ತು ಬಂಡವಾಳಷಾಹಿಗಳ ಹಿತಕಾಯಲು ಮುಂದಾಗುವ ಮೂಲಕ ಕಾರ್ಪೊರೇಟ್ ಕಂಪನಿಗಳ ಬಾಲಂಗೋಚಿಗಳಾಗುತ್ತಿವೆ ಎಂದು ವಿಷಾಧಿಸಿದರು.
ಈ ಭೂಮಿಗೆ ನಾವು ವಾರಸುದಾರರಲ್ಲ, ಮುಂದಿನ ಪೀಳಿಗೆಗೆ ಪರಿಸರವನ್ನು ಹೊಲಸು ಮಾಡದೆ ಶುದ್ದವಾದ ಗಾಳಿ, ಆಹಾರವನ್ನು ಬಿಟ್ಟು ಹೋಗುವುದು ದೊಡ್ಡ ಆಸ್ತಿಯಾಗಿದೆ.ಪ್ರಳಯ ಕಾಲದಲ್ಲಿ ನಾವುಗಳು ಗಾಡನಿದ್ದೆಯಲ್ಲಿದೆ. ಮನುಕುಲ ಬದುಕುವ ಕಾಲ ಬಹಳ ಕಡಿಮೆ ಇದೆ. ಭೂಮಿ ತಾಯಿ ಆರೋಗ್ಯ ಕೆಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಮಾಧ್ಯಮಗಳು ಜನಪರ ಕಾಳಜಿ ತೋರದೆ ಅನಾವಶ್ಯಕವಾದ ವಿಷಯಗಳನ್ನು ವೈಭವೀಕರಿಸುತ್ತಿದೆ ಎಂದು ವಿಷಾದಿಸಿ, ಪತ್ರಿಕೋದ್ಯಮ ಮತ್ತು ಜನತಂತ್ರ ಎರಡು ಒಂದೇ ತಾಯಿಯ ಕರಳು ಬಳ್ಳಿಗಳು ತಾಯಿ ಮತ್ತು ಮಗುವಿನ ಸಂಬಂಧವಿದ್ದಂತೆ ಎಂದ ಅವರು ಮಹತ್ವದ ಸುದ್ದಿಗಳ ಬಗ್ಗೆ ವಿಚಿತ್ರ ಮೌನ, ರೋಗ ಬಡಿದಂತೆ ಇರುವುದು,ಜನಪ್ರತಿನಿಧಿಗಳ ಸಭೆಗಳಲ್ಲಿ ಜನಪರ ಸಮಸ್ಯೆಗಳನ್ನು ಬಗ್ಗೆ ಚರ್ಚಿಸದೆ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ಕಾಲಹರಣ ಮಾಡಿ ಜನರ ಹಣವನ್ನು ಪೋಲು ಮಾಡುವುದು ಇಂದು ಸಾಮಾನ್ಯವಾಗಿದೆ ಎಂದು ವಿಷಾಧಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕಳೆದ 2008ರಿಂದ ಪತ್ರಿಕಾ ದಿನಾಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಹಬ್ಬದ ವಾತವರಣದಲ್ಲಿ ಆಚರಿಸಲಾಗುತ್ತಿದೆ. ಪತ್ರಕರ್ತರ ಬದುಕು ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಗಾದೆ ಮಾತಿನಂತ ಆಗಿದೆ. ತಮ್ಮ ಕುಟುಂಬದ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಸಿ ಸಮಾಜದ ಕಳಕಳಿಯಲ್ಲಿ ಮುಳುಗಿ ಹೋಗಿರುವಂತಹ ಬದುಕು ಆಗಿದೆ ಎಂದರು.
ಇಂದು 46 ಮಂದಿ ಪತ್ರಕರ್ತರ ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಹಾಗೂ ಪದವಿ ವ್ಯಾಸಂಗದ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ಮೂಲಕ 1.46 ಲಕ್ಷ ರೂಗಳನ್ನು ಪ್ರೋತ್ಸಾಹಧನವಾಗಿ ವಿತರಿಸಲಾಗುತ್ತಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಪತ್ರಕರ್ತರ ಕಲ್ಯಾಣ ನಿಧಿಯನ್ನು ಒಂದು ಕೋಟಿ ರೂಗಳವರೆಗೆ ಕ್ರೋಢೀಕರಿಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್. ಗಣೇಶ್ ಪ್ರಾಸ್ತಾವಿಕ ನುಡಿಗಳಾಡಿ, ಪತ್ರಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಗಾಂಧಿಜೀ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಾಹಿತಿ ಮತ್ತು ಪತ್ರಿಕಾ ಪಿತಾಮಹಾ ಡಿ.ವಿ.ಜಿ.ಅವರ ಅನಿಸಿಕೆ, ಅಭಿಪ್ರಾಯಗಳನ್ನು ನೆನಪಿಸಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಇತಿಹಾಸ ಸ್ಮರಿಸಿದರು.
ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಕಳೆದ ತಮ್ಮ ಮೂರುವರ್ಷದ ಆಡಳಿತದಲ್ಲಿ ಪತ್ರಕರ್ತರ ಸಂಘದ ಕಟ್ಟಡವನ್ನು ಸುಸಜ್ಜಿತವಾದ ವಿನ್ಯಾಸದ ಜೂತೆಗೆ ಹವಾನಿಯಂತ್ರವನ್ನಾಗಿ ಮಾರ್ಪಡಿಸಿ ರಾಜ್ಯದಲ್ಲಿ ಮಾದರಿ ಸಂಘದ ಕಟ್ಟಡವಾಗಿ ಪರಿವರ್ತಿಸಲು ಆರಂಭಿಕ ಸಹಕಾರ ನೀಡಿದ ಕೆ.ಯು.ಡಿ.ಎ. ಮಾಜಿ ಸದಸ್ಯ ಅಪ್ಪಿನಾರಾಯಣಸ್ವಾಮಿಯವರನ್ನು ಶ್ಲಾಘಿಸಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ,ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು, ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬೆಂಗಳೂರು ಉತ್ತರ ವಿವಿ ಪತ್ರಿಕೋದ್ಯಮ,ಸಂವಹನ ವಿಭಾಗದ ಸಂಯೋಜಕ ಡಾ.ಆರ್.ಮಂಜುನಾಥ್ ಉಪಸ್ಥಿತರಿದ್ದು, ಉಪನ್ಯಾಸಕ ಡಾ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು, ಸಂಘದ ಖಜಾಂಜಿ ಎ.ಜಿ. ಸುರೇಶ್‍ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್ ಹಾಗೂ ರಾಜ್ಯ ನಾಮನಿರ್ದೇಶನ ಸದಸ್ಯ ವಾಸುದೇವಹೊಳ್ಳ ಉಪಸ್ಥಿತರಿದ್ದರು.