ಕೋಲಾರ,ಜು.25: ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿರುವುದು ಗಮನಿಸಿದ್ದು ಅವುಗಳಿಗೆ ಶಾಶ್ವತವಾದ ಪರಿಹಾರಗಳನ್ನು ಹಂತ,ಹಂತವಾಗಿ ಕಲ್ಪಿಸಲು ಕ್ರಮ ಕೈಗೊಂಡು ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಉತ್ತಮವಾದ ಆಡಳಿತ ನೀಡಲು ನಿಮ್ಮೆಲ್ಲರ ಸಹಕಾರದೊಂದಿಗೆ ಪಣ ತೊಡುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ನಾನು ಇದೇ ರಾಜ್ಯದ, ತುಮಕೊರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಇದೇ ಅವಿಭಜಿತ ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಕನ್ನಡಿಗನಾಗಿದ್ದೇನೆ. ಕಳೆದ 8 ವರ್ಷ ಉಪನ್ಯಾಸಕನಾಗಿ ವಿವಿಧ ಕಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಈ ಹುದ್ದೆಗೆ ಬಂದವನಾಗಿದ್ದೇನೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾರ್ಯನಿರ್ವಾಹಿಸಿದ್ದು, ಇದೀಗ ಕೋಲಾರದಲ್ಲಿ ಕಾರ್ಯನಿರ್ವಹಿಸಲು ಸಿಕ್ಕಿರುವ ಅವಕಾಶವನ್ನು ಸದ್ಬಳಸಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ 17 ಇಲಾಖೆಗಳಲ್ಲಿ ನೇಮಕಾತಿಯ ಅಧಿಕಾರಿಗಳು ಇಲ್ಲ. ಕಂದಾಯ ಇಲಾಖೆಯಲ್ಲಿ ಶೇ 60 ರಷ್ಟು ಸಿಬ್ಬಂದಿ ಕೊರತೆ ಇದೆ. 300 ಗ್ರಾಮ ಲೆಕ್ಕಿಗರ ಪೈಕಿ 71 ಹುದ್ದೆಗಳು ಖಾಲಿ ಇದೆ. ವಿವಿಧ ಇಲಾಖೆಗಳಿಂದ ಬೇರೆ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳನ್ನು ವಾಪಾಸ್ ಕರೆಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನನಗೆ ಹುದ್ದೆಯ ಆಹಂ ಇಲ್ಲ. ಎಲ್ಲಾ ಅಧಿಕಾರಿಗಳೊಂದಿಗೆ ಜಿಲ್ಲೆಯ ಶ್ರೇಯೋಭಿವೃದ್ದಿಗೆ ಕಾರ್ಯನಿರ್ವಹಿಸುತ್ತೇನೆ. ಮೈಸೂರು, ಮಡಿಕೇರಿ, ಹಾಸನ,ಬೆಂಗಳೂರು ಸೇರಿದಂತೆ ಅನೇಕ ಕಡೆ ಕಾರ್ಯನಿರ್ವಹಿಸಿದ್ದೇನೆ. ಆಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ, ಸಕ್ಕರೆ ಕಂಪನಿ, ಹಿಂದುಳಿದ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆಂದು ಹೇಳಿದರು.
ಕಾರ್ಮಿಕ ಇಲಾಖೆಯಲ್ಲಿದ್ದಾಗ 17 ಲಕ್ಷ ವಿಧ್ಯಾರ್ಥಿಗಳಿಗೆ ವಿಶೇಷವಾದ ವೇತನದ ಸೌಲಭ್ಯ ಕಲ್ಪಸಿದ್ದೇನೆ, 20 ವಿವಿಧ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಶೈಕ್ಷಣಿಕ ನೆರವು ಸಿಗುವಂತೆ ಮಾಡಿರುವೆ,150 ಮೂರಾರ್ಜಿ ವಸತಿ ಶಾಲೆ, 350 ವಿದ್ಯಾರ್ಥಿಗಳ ವಸತಿ ನಿಲಯಗಳು, ಸೇರಿದಂತೆ ಉನ್ನತವಾದ ಶಿಕ್ಷಣಕ್ಕೆ ಪೂರಕವಾದ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ನಿರ್ವಹಿಸಿರುವುದಾಗಿ ತಿಳಿಸಿದರು.
ಮುಖ್ಯವಾಗಿ ಶೈಕ್ಷಣಿಕವಾಗಿ 40 ಲಕ್ಷ ಕಾರ್ಮಿಕ ಮಕ್ಕಳನ್ನು ನೊಂದಾಯಿಸುವ ಮೂಲಕ ಅನುಕೊಲಗಳನ್ನು ಕಲ್ಪಿಸಿದೆ. 11 ಲಕ್ಷ ವಿದ್ಯಾರ್ಥಿಗಳಿಗೆ 800 ಕೋಟಿ ರೂ ವೇತನವನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯಲ್ಲಿ ಪೈಲೆಟ್ ಯೋಜನೆ ಮೂಲಕ ವಿನೂತನವಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಒತ್ತು ನೀಡಲಾಯಿತು, ವಿಮೆ ಸೌಲಭ್ಯ, ಉನ್ನತ ಶಿಕ್ಷಣ ಸೌಲಭ್ಯಗಳು, ಸಾಮಾಜಿಕ ಭದ್ರತೆ ನೀಡಲಾಯಿತು. ಕೊರೋನಾ ಸಂದರ್ಭದಲ್ಲಿ ಶ್ರಮಿಕ ವರ್ಗದವರನ್ನು ಗುರುತಿಸಿ 25 ಸಾವಿರ ಜನಕ್ಕೆ ತಮ್ಮ ಊರುಗಳಿಗೆ ತೆರಳು ಸಾರಿಗೆ ಸೌಲಭ್ಯ ಪ್ರತಿ ದಿನ ಆಹಾರದ ಕಿಟ್ಗಳು ನೀಡಿದ್ದನ್ನು ನೆನಪಿಸಿಕೊಂಡರು.
ಜಿಲ್ಲಾ ಪಂಚಾಯುತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಬಸಂತಪ್ಪ ಮಾತನಾಡಿ, ಪ್ರಥಮ ದರ್ಜೆ ಗುಮಾಸ್ತೆಯಾಗಿ, ಉಪನ್ಯಾಸಕಿಯಾಗಿ, ಉಪವಿಭಾಗಾಧಿಕಾರಿಯಾಗಿ, ಅಪರ ಜಿಲ್ಲಾಧಿಕಾರಿಯಾಗಿ ವಿವಿಧಡೆ ಕಾರ್ಯ ನಿರ್ವಹಿಸಿರುವ ವಿವಿಧ ಜಿಲ್ಲೆಗಳ ಪರಿಚಯದೊಂದಿಗೆ ತಮ್ಮ ಕೊಡುಗೆಗಳನ್ನು ತಿಳಿಸಿದ ಅವರು ಜಿಲ್ಲಾ ಪಂಚಾಯತ್ ಸಿ.ಇ.ಓ ಅಗಿ ಎರಡನೇ ಅವಕಾಶ ಕೋಲಾರದಲ್ಲಿ ದೊರಕಿದೆ. ಈಗಾಗಲೇ ಅಧಿಕಾರ ವಹಿಸಿಕೊಂಡ ನಂತರ ಅಂಗನಾವಡಿಗಳಿಗೆ, ಕೆರೆಗಳು ಅಭಿವೃದ್ದಿಯಲ್ಲಿ ಅಮೃತ ಸರೋವರ ಯೋಜನೆಗಳನ್ನು ಗಮನಿಸಿರುವೆ ಎಂದು ಹೇಳಿದರು.
ಈ ಹಿಂದಿನ ಸಿ.ಇ.ಓ. ಯುಕೇಶ್ಕುಮಾರ್ ಅವರು ಉತ್ತಮ ಕೆಲಸಗಳನ್ನು ಮಾಡಿ ಜಿಲ್ಲೆಗೆ ಪ್ರಶಸ್ತಿ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದ ಅವರು, ಅಮೃತ ಸರೋವರ ಯೋಜನೆಯಲ್ಲಿ 200 ಕೆರೆಗಳ ಅಭಿವೃದ್ದಿ ಗುರಿ ನಿಗಧಿಪಡಿಸಲಾಗಿದೆ ಅದರೆ ನಾವು ಇನ್ನು ಹೆಚ್ಚುವರಿಯಾಗಿ 224 ಕೆರೆಗಳ ಗುರಿ ಹೊಂದಿರುವುದಾಗಿ ತಿಳಿಸಿದರು. ಅಂಗನವಾಡಿಗಳಲ್ಲಿ ಎಸ್.ಸಿ.ಎಸ್.ಟಿ. ಸಮುದಾಯದವರು ಅಡುಗೆ ಮಾಡುವುದಕ್ಕೆ ಕೆಲವಡೆ ಅಸಮಾಧಾನ ಹಾಗೂ ಅಸಹಕಾರ ವ್ಯಕ್ತಪಡಿಸುತ್ತಿರುವುದು ಸಮಂಜಸವಲ್ಲ. ಗರ್ಭಿಣಿ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರಗಳನ್ನು ಸಮರ್ಪಕವಾಗಿ ತಲುಪಿಸ ಬೇಕಾಗಿದೆ ಎಂದು ತಿಳಿಸಿದರು.
ಕೆರೆಗಳಲ್ಲಿ ಹೂಳು ತೆಗೆದು ನೀರು ತುಂಬಿಸುವ ಕೆಲಸಗಳಿಗೆ ಮರು ಚಾಲನೆ ನೀಡ ಬೇಕಾಗಿದೆ. ಗ್ರಾಮಗಳಲ್ಲಿ ತೆರಿಗೆ ಸಂಗ್ರಹಕ್ಕೆ ಪಂಚತಂತ್ರ ಅನುಷ್ಠಾನಕ್ಕೆ ಒತ್ತು ನೀಡ ಬೇಕಾಗಿದೆ.ಮೊಬೈಲ್ಗಳ ಅ್ಯಪ್ಗಳ ಸದ್ಬಳಿಸಿ ಕೊಂಡು ಹಣ ಪಾವತಿ, ಜಲ ಜೀವನ್ ಮಿಷನ್, ಶೌಚಾಲಯ, ಸ್ವಚ್ಚತೆ, ರಸ್ತೆಗಳ ಅಭಿವೃದ್ದಿ, ನರೇಗಾ ಯೋಜನೆ ಮೂಲಕ ಉದ್ಯೋಗ ಸೃಷ್ಠಿ ಇತ್ಯಾದಿ ಸರ್ಕಾರದ ಸೌಲಭ್ಯಗಳ ಅರಿವು ಮೋಡಿಸಿ ಸದ್ಬಳಿಸಿ ಕೊಳ್ಳುವಂತೆ ಗ್ರಾಮ ಪಂಚಾಯತ್ಗಲ ಮೂಲಕ ಜಾಗೃತಿ ಮೋಡಿಸುವುದು ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ, ನಾನು ಇದೇ ಅವಿಭಜಿತ ಜಿಲ್ಲೆಯ ಮಂಡಿಗಲ್ ಗ್ರಾಮದವನಾಗಿದ್ದು ನಾನು ಬಡ ಕುಟುಂಬದಿಂದ ಬಂದವನು ನಮ್ಮ ತಂದೆ ಓರ್ವ ಕಾರ್ಮಿಕರಾಗಿದ್ದವರು.ನನ್ನ ಶಿಕ್ಷಣ ಚಿಕ್ಕಬಳ್ಳಾಪುರ,ಬೆಂಗಳೂರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವನಾಗಿದ್ದೇನೆ.ಮೂಲತಹ ಕಾರ್ಮಿಕ ಕುಟುಂಬದಿಂದ ಬಂದ ನನಗೆ ಬಡತನದ ಅರಿವು ಇದೆ. ನನ್ನ ಉನ್ನತ ಶಿಕ್ಷಣದ ತರಬೇತಿಯಲ್ಲಿ 120 ಮಂದಿ ಪೈಕಿ 50 ಮಂದಿ ಕೋಲಾರದವರೇ ಇದ್ದದ್ದು ವಿಶೇಷತೆಯಾಗಿತ್ತು. ನನ್ನ ವೃತ್ತಿಯಲ್ಲಿ ಮೂಲತಹ ಕೋಲಾರದ ಅನೇಕ ಅಧಿಕಾರಿಗಳ ಪರಿಚಯವಾಗಿದ್ದನ್ನು ನೆನಪಿಸಿ ಕೊಂಡರು.
ಲೋಕಯುಕ್ತ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವುದು ನನಗೆ ತೃಪ್ತಿ ತಂದಿದ್ದು, ಬೆಸ್ಕಾಂ ಜಾಗೃತ ದಳದಲ್ಲಿ ಇದ್ದು ಕಾರ್ಯನಿರ್ವಹಿಸಿರುವೆ. ಪೊಲೀಸ್ ಇಲಾಖೆ ಇಂಟಲೇಜೇನ್ಸ್ ಇಲಾಖೆಯಲ್ಲಿ ಸೇರಿದಂಂತೆ ಎ.ಎಸ್.ಪಿ. ಡಿಸಿಪಿಯಾಗಿ ಸೇರಿದಂತೆ ಹಲವಾರು ಕಡೆ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ನೆನಪಿಸಿ ಕೊಂಡರು. ಪ್ರಮುಖವಾಗಿ ಕೊರೋನಾ ಸಂದರ್ಭದಲ್ಲಿ ತಮ್ಮ ಕುಟುಂಬವು ಸಂಕಷ್ಟಕ್ಕೆ ಸಿಲುಕಿದಾಗ ಕರ್ತವ್ಯವನ್ನು ನಿರ್ಲಕ್ಷಿಸದೆ ಸೇವೆ ಸಲ್ಲಿಸಿದ್ದನ್ನು ಹಾಗೂ ಬೆಂಗಳೊರಿನಲ್ಲಿ 150 ಅಂಬ್ಯುಲೆನ್ ವ್ಯವಸ್ಥೆ ಮಾಡಿದ್ದ ಸಂದರ್ಭ ಸೇರಿದಂತೆ ತಮ್ಮ ವೃತ್ತಿಯಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿದ್ದನ್ನು ವಿವರಿಸಿದ ಅವರು ಕೊರೋನಾ ಸಂದರ್ಭವು ಪ್ರತಿಯೊಬ್ಬರಿಗೂ ಪಾಠ ಕಲಿಸಿದಂತಾಯಿತು ಎಂದು ಅಭಿಪ್ರಾಯಪಟ್ಟರು.
ಪತ್ರಿಕೆಗಳು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ಪತ್ರಿಕಾ ರಂಗವು ಸಮಾಜದಲ್ಲಿ 4ನೇ ಅಂಗವಾಗಿ ಪರಿಗಣಿಸಲಾಗಿದೆ. ಶಾಸನಗಳ ಅನುಷ್ಟಾನಕ್ಕೆ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿದೆ. ಪತ್ರಿಕಾ ವರದಿಗಳು ಅಧಿಕಾರಿಗಳ ಕರ್ತವ್ಯದಲ್ಲಿ ಎಚ್ಚರಿಸುವಂತ ಕೆಲಸಗಳನ್ನು ಮಾಡಲಿದೆ. ಸಾಮಾಜಿಕ ಜಾಲತಾಣದ ಯೂ ಟ್ಯೊಬ್ಗಳು, ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ಸಮಾಜ ಘಾತುಕ ಕೃತ್ಯಗಳಿಗೆ ಸಂಬಂಧಿಸಿದಂತೆ ವೈಭವಿಕರಣ ಸಲ್ಲದು, ಜನತೆ ಸೌಲಭ್ಯಗಳನ್ನು ಕಲ್ಪಿಸುವಂತ ಸಕಾರತ್ಮಕ ಸುದ್ದಿಗಳಿಗೆ ಹೆಚ್ಚು ಒತ್ತು ನೀಡ ಬೇಕೆಂದರು. ಅವರು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಪಡೆಯಬೇಕು. ಸಂವಿಧಾನದ ಪ್ರಕಾರ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯ. ಸಂವಿಧಾನ ಬದ್ದ ಕೆಲಸಗಳಿಗೆ ಪೊಲೀಸ್ ಇಲಾಖೆಯ ಸಹಕಾರ ಸದಾ ಇರುತ್ತದೆ. ನಮ್ಮ ಸೀಮಿತದಲ್ಲಿ ಕಾರ್ಯನಿರ್ವಹಿಸಲು ನಾವುಗಳು ಬದ್ದರಾಗಿರುತ್ತೇವೆ ಎಂದರು.
ಕಳೆದ 4 ತಿಂಗಳು ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವ್ಯಸ್ಥೆಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಈಗ ಕಳೆದ ತಿಂಗಳಿಂದ ಪ್ರಾರಂಭಿಸಿರುವೆ. ಮುಂದಿನ ದಿನಗಳಲ್ಲಿ ಮತ್ತು ಚುನಾವಣೆಗಳು ಬರಲಿದ್ದು ಅದಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿ ಕೊಳ್ಳ ಬೇಕಾಗಿದೆ. ಜಿಲ್ಲೆಯಲ್ಲಿ ಕೆಲವಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಹಂತ, ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ರಾತ್ರಿ 11 ಗಂಟೆಯಲ್ಲಿ ಸಂಚರಿಸುವರ ಬೆರಳಚ್ಚು ಪಡೆಯಲಾಗುವುದು, ಈಗಾಗಲೇ ಸಿ.ಸಿ.ಕ್ಯಾಮೆರಗಳಿಗೆ ಸಂಬಂಧಿಸಿದಂತೆ 40 ಲಕ್ಷ ನಗರೋತ್ಥಾನದಿಂದ ಪಡೆಯಲಾಗಿದೆ. ನರಸಾಪುರ ಮತ್ತು ಸುಗಟೂರಿನಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು. 500 ವಸತಿಗಳಿರುವ ಕ್ವಾಟರ್ಸ್ ನಿರ್ಮಿಸಲು ಇಲಾಖೆಯು ಚಿಂತಿಸಿದೆ ಜೂತೆಗೆ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜನರ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಜಿಲ್ಲಾಡಳಿತ ಮುಂದಾಗಬೇಕು. ದೊಡ್ಡ ಹಳ್ಳಿಯಂತೆ ಇರುವ ಕೋಲಾರದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಜಿಲ್ಲಾಧಿಕಾರಿ ಆಕ್ರಂಪಾಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಂತಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಅವರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಬಂದ ಮರುದಿನವೇ ಪದ್ಮ ಬಸಂತಪ್ಪ ರವರು ಜಿಲ್ಲಾದ್ಯಂತ ಸಂಚರಿಸಿ ಸಮಸ್ಯೆಗಳ ಅವಲೋಕನ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸ್ಥಳೀಯರು ಮತ್ತು ಕನ್ನಡಿಗರಾಗಿದ್ದು, ಹೊಂದಾಣಿಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷ ಅವರು ನಗರಪ್ರದಕ್ಷಿಣೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಆಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಅಪರಾಧ ಪ್ರಕರಣಗಳನ್ನು ಒಂದೆರಡು ದಿನಗಳಲ್ಲಿ ಪತ್ತೆ ಹಚ್ಚಿ ಇಲಾಖೆಯ ಕೆಲಸಕ್ಕೆ ವೇಗವನ್ನು ನೀಡಿದ್ದಾರೆ. ಪದ್ಮ ಬಸಂತಪ್ಪ ರವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದು, ಈ ಮೂವರ ಸಂಘಟಿತ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಮಾತನಾಡಿ, ಜಿಲ್ಲಾಧಿಕಾರಿ ಆಕ್ರಂಪಾಷ ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿ ಎಂದರೆ ತಪ್ಪಿಲ್ಲ, ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ವಿದೇಶದಲ್ಲಿ ಕೋಲಾರ ಜಿಲ್ಲಾಧಿಕಾರಿಯನ್ನು ನೆನೆಯುತ್ತಿದ್ದಾರೆ ಎಂದರು. ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ.
ಅಧಿಕಾರಿಗಳು ಕೆಲಸ ಮಾಡಿದರೆ, ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ, ರಾಜಕಾರಣಿಗಳು ಒಂದು ಪಕ್ಷದಲ್ಲಿ ಇರುತ್ತಾರೆ, ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ ಇವರಿಂದ ಯಾವುದೇ ಅಭಿವೃದ್ಧಿ ಕಾಣಲ್ಲ ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್ಕುಮಾರ್ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ಕುಮಾರ್ ನಿರೂಪಿಸಿ, ವಂದಿಸಿದರು.
ಸಂವಾದದಲ್ಲಿ ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ, ಎಸ್.ಸಚ್ಚಿದಾನಂದ, ಅಬ್ಬಣಿಶಂಕರ್, ಬಿ.ಎಲ್.ರಾಜೇಂದ್ರಸಿಂಹ, ಸಿ.ವಿ.ನಾಗರಾಜ್, ಎನ್.ಸತೀಶ್, ಜಹೀರ್ಆಲಂ, ಎಂ.ಡಿ.ಚಾಂದ್ಪಾಷ, ಕೋ.ನಾ.ಮಂಜುನಾಥ್, ಸಿ.ಜಿ.ಮುರಳಿ, ಕೆ.ಆಸೀಫ್ಪಾಷ ಕೆ.ನಾರಾಯಣಗೌಡ, ಚಂದ್ರು, ಮುಕ್ತಿಯಾರ್ ಅಹಮದ್, ರಮೇಶ್, ಶ್ರೀನಿವಾಸಮೂರ್ತಿ, ಗಂಗಾಧರ್, ಗೋಪಿನಾಥ್, ಬಿ.ಎಸ್.ಸ್ಕಂದಕುಮಾರ್, ವಿ.ನವೀನ್ಕುಮಾರ್, ಕೆ.ಬಿ.ಜಗದೀಶ್, ವೆಂಕಟೇಶಪ, ಶಮ್ಗರ್, ಎಂ.ವಿ.ವೇಣುಗೋಪಾಲ್, ಸುನೀಲ್ಕುಮಾರ್, ಅಮರ್, ಮದನ್, ಮಂಜುನಾಥ್, ಈಶ್ವರ್, ಸಮೀರ್ಅಹಮದ್, ಬಾಲನ್, ಲಕ್ಷ್ಮೀಪತಿ ಡಿ.ಎನ್, ಎನ್.ಶಿವಕುಮಾರ್, ಸುಧಾಕರ್, ರಾಘವೇಂದ್ರಪ್ರಸಾದ್ ಅಮರೇಶ್, ಪರ್ವೀಜ್ ಅಹಮದ್, ವಿಜಯಕುಮಾರ್, ವಿನೋದ್, ಸವಜ್ಞಮೂರ್ತಿ, ಅಮರ್ ಮಂಜುನಾಥ್ ಉಪಸ್ಥಿತರಿದ್ದರು.