ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಡೆಂಗೆ ತಡೆಯಲು ಸೊಳ್ಳೆ ಕಡಿತದಿಂದ ಪಾರಾಗಬೇಕು. ಅದಕ್ಕೆ ಪೂರಕವಾಗಿ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ನೀರು ಜಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ನಾಗಲಕ್ಷ್ಮಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಗೆ ವಿರೋಧಿ ಮಾಸಾಚಣೆ ಸಮಾರಂಭದಲ್ಲಿ ಮಾತನಾಡಿ, ಡೆಂಗೆ ಜನರ ಆರೋಗ್ಯಕ್ಕೆ ಮಾರಕವಾಗಿದೆ. ಮನೆ ಮಂದಿಗೆ ಸೊಳ್ಳೆ ಕಡಿಯದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸುವುದರ ಮೂಲಕ ಸೊಳ್ಳೆಗಳನ್ನು ದೂರವಿರಿಸಬೇಕು ಎಂದು ಹೇಳಿದರು.
ಡೆಂಗೆ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ತಡ ಮಾಡಿದರೆ ಆರೋಗ್ಯ ಹದಗೆಡುವ ಅಪಾಯ ಇರುತ್ತದೆ. ನಾಗರಿಕರು ಈ ವಿಷಯದಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು. ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಸಿಎಒ ರಾಜೇಶ್ವರಿ, ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್, ಶೇಖರ್, ಶಂಕರ್, ಸದಸ್ಯ ಆನಂದ್, ಸುರೇಶ್, ಸಂತೋಷ್, ಶಶಿಧರ್, ನಾಗೇಶ್ ಇದ್ದರು.