ಕೋಲಾರ,ಜು.18: ಮೌಲ್ಯಯುತ ಬದುಕಿಗೆ ಸ್ಫೂರ್ತಿದಾಯಕವಾದ ಕೃತಿಗಳನ್ನು, ಗ್ರಂಥಗಳನ್ನು ಹಾಗೂ ಪತ್ರಿಕೆಗಳನ್ನು ಓದುವ ಆಸಕ್ತಿ ವೃದ್ಧಿಪಡಿಸುವ ಒಳ್ಳೆಯ ಉದ್ದೇಶದಿಂದ ಮನ್ವಂತರ ಪ್ರಕಾಶನದಿಂದ ಹಮಿಕೊಂಡಿರುವ “ಜ್ಞಾನ ವಿಕಾಸ” ಅಭಿಯಾನ ಪ್ರಶಂಸನೀಯ ಕಾರ್ಯವೆಂದು ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಅವರು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ಪ್ರಸಿದ್ಧ ಸಂಗೀತ ವಿಧೂಷಿ, ಲೇಖಕಿ ಮಾಯಾ ಬಾಲಚಂದ್ರ ಅವರ ನಿವಾಸದಲ್ಲಿ ಬುಧವಾರ(ಜು/17) ಸಂಜೆ ಹಮ್ಮಿಕೊಂಡಿದ್ದ “ಜ್ಞಾನ ವಿಕಾಸ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಆಸಕ್ತಿ ಕಡಿಮೆ ಆಗುತ್ತಿದೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಒತ್ತಡದಿಂದ ಹಾಗೂ ಮೊಬೈಲ್ಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಅವರಲ್ಲಿ ಸಾಹಿತ್ಯ, ಸಂಸ್ಕೃತಿ. ಆಚಾರ-ವಿಚಾರ. ಕ್ರೀಡೆ, ಕೃಷಿ, ವಿಜ್ಞಾನ, ಪರಿಸರ ಹಾಗೂ ಮೌಲ್ಯಯುತ ಬದುಕಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಅವಕಾಶ ಮತ್ತು ಆಸಕ್ತಿ ಇಲ್ಲದಂತಾಗಿದೆ ಎಂದು ವಿಷಾಧಿಸಿದರು.
ಮಕ್ಕಳಲ್ಲಿ ಓದುವ ಪ್ರವೃತ್ತಿ ವೃದ್ಧಿಸಲು ಹಮ್ಮಿಕೊಂಡಿರುವ ಜ್ಞಾನ ವಿಕಾಸ ಅಭಿಯಾನ ಸಾರ್ಥಕವಾಗಬೇಕಾದರೆ ಜಿಲ್ಲೆಯ ಪ್ರತಿಯೊಬ್ಬರು ಕೈಜೋಡಿಸಬೇಕು, ವಿಶೇಷವಾಗಿ ಪೋಷಕರು ಮತ್ತು ಸಂಘ ಸಂಸ್ಥೆಗಳು ತಮ್ಮ ತಮ್ಮ ಪರಿಮಿತಿಯಲ್ಲಿ ಪುಸ್ತಕ ಓದುವ ಆಸಕ್ತಿ ವೃದ್ಧಿಗೆ ಗಮನ ಹರಿಸುವಂತೆ ಕೋರಿದರು.
ಸಾಹಿತಿ, ಹಿರಿಯ ಪತ್ರಕರ್ತ ಆರ್.ಚೌಡರೆಡ್ಡಿ ಮಾತನಾಡಿ, ಮಕ್ಕಳು, ಯುವ ಜನತೆಯಲ್ಲಿ ಪುಸ್ತಕ ಓದುವ ಆಸಕ್ತಿ ಪುನಶ್ಛೇನಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಪುಸ್ತಕ ಯಾನ ಗುರಿ ಮಟ್ಟಲಿ ಎಂದು ಸಾಹಿತಿ, ಹಿರಿಯ ಪತ್ರಕರ್ತ ಆರ್.ಚೌಡರೆಡ್ಡಿ ಶುಭ ಹಾರೈಸಿದರು.
ಕೇವಲ ಒಂದು ತಾಲೂಕಿಗೆ ಸೀಮಿತಗೊಳಿಸದೆ ಯಾನವನ್ನು ಇಡೀ ಜಿಲ್ಲೆಯಾಧ್ಯಂತ ತೆಗೆದುಕೊಂಡು ಹೋಗಲು ಮನ್ವಂತರ ಪ್ರಕಾಶನದ ಮುಖ್ಯಸ್ಥ ಅನಂತರಾಮ್ ಅವರು ನಿರ್ಧರಿಸಿರುವುದು ಅಭಿನಂದನಾರ್ಹ. ಈ ಕಾರ್ಯಕ್ಕೆ ಶಿಕ್ಷಕರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಜ್ಞಾನ ವಿಕಾಸ ಅಭಿಯಾನದ ಮುಖ್ಯಸ್ಥ, ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ.ಅನಂತರಾಮ್, ಇತ್ತೀಚಿನ ದಿನಗಳಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ, ಯುವಕರು, ಶಿಕ್ಷಕರು ಸೇರಿದಂತೆ ವಿವಿಧ ವರ್ಗದ ಜನರಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ, ಸಾಹಿತ್ಯ, ಸಂಸ್ಕೃತಿ, ಲೋಕದ ವಿಚಾರಗಳು ತಿಳಿಯಬೇಕಾದರೆ ಕೇವಲ ಮೊಬೈಲ್ ಅಥವಾ ಇಂಟರ್ ನೆಟ್ ಗಳಿಂದ ಮಾತ್ರ ಸಾಧ್ಯವಿಲ್ಲ, ದಿನ ಪತ್ರಿಕೆ, ಒಳ್ಳೆಯ ನಿಯತಕಾಲಿಕೆಗಳು, ವಿದ್ವಾಂಸರು, ಗುಣಾತ್ಮಕ ಸಾಹಿತಿಗಳು ರಚಿಸಿರುವ ಗ್ರಂಥಗಳು, ಕತೆ,ಕಾದಂಬರಿ, ಕವಿತೆ, ಕ್ರೀಡೆ, ಸಂಸ್ಕೃತಿ, ಪರಿಸರ, ವಿಜ್ಞಾನ, ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಧ್ಯಯನ ಮಾಡಿ ಜ್ಞಾನ ಸಂಪಾದಿಸಲು ಓದು ಬರಹ ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಜ್ಞಾನ ವಿಕಾಸ ಅಭಿಯಾನ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆದ ಬಳಿಕ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಿಗೆ ವಿಸ್ತರಿಸಲಾಗುವುದು, ಸಂತೆ, ಜಾತ್ರೆ, ಹಬ್ಬಗಳಲ್ಲಿ ಪುಸ್ತಕ ಓದುವ ಆಸಕ್ತಿ ಮೂಡಿಸಲು ವಿಶೇಷ ಗಮನ ನೀಡಲಾಗುವುದು, ಅಭಿಯಾನಕ್ಕೆ ಎಲ್ಲ ಜನರ, ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುವುದು, ಸಮಾನ ಮನಸ್ಕರ ತಂಡದೊಂದಿಗೆ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಪುಸ್ತಕ ಜಾತ್ರೆಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಾಯಾ ಬಾಲಚಂದ್ರ ಅವರು ಅನಂತರಾಮ್ ಅವರಿಗೆ ಸ್ವರಚಿತ ಅಭಿವ್ಯಕ್ತಿ ಚಿಂತನೆ ಎಂಬ ಕೃತಿಯನ್ನು ನೀಡಿ, ಪುಸ್ತಕ ಯಾನಕ್ಕೆ ಶುಭ ಕೋರಿದರು. ಸಾಹಿತಿಗಳಾದ ಎನ್.ಶಂಕರೇಗೌಡ, ಆರ್.ಚೌಡರೆಡ್ಡಿ ಅವರುಗಳು ನೆನೆನೆನಪಿನ ತೋರಣ ಹಾಗೂ ಮಕ್ಕಳ ಕಥೆಗಳನ್ನು ಆಧರಿಸಿರುವ ತೋರಣ ಎಂಬ ಕೃತಿಗಳನ್ನು ನೀಡಿದರು.
ಮನ್ವಂತರ ಪ್ರಕಾಶನದ ಸಂಚಾಲಕ ಎಸ್.ಎನ್.ಪ್ರಕಾಶ್, ಕವಿಗಳಾದ ಅರುಣ್ ಕುಮಾರ್, ಮಮತಾರಾಣಿ, ಆರತಿ, ಗೀತಾ, ಲಕ್ಷ್ಮೀ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕಮಲ ಹೆಗಡೆ, ಜಯಲಕ್ಷ್ಮಿ, ಸುವರ್ಣ ಹಾಗೂ ಲಕ್ಷ್ಮೀ ಉಪಸ್ಥಿತರಿದ್ದರು.
ಫೋಟೊ ಶೀರ್ಷಿಕೆ:
ಜನರಲ್ಲಿ ಓದುವ ಪ್ರವೃತ್ತಿ ಹೆಚ್ಚು ಮಾಡುವ ಉದ್ದೇಶದಿಂದ ಮನ್ವಂತರ ಪ್ರಕಾಶನ,ಕೋಲಾರ ವತಿಯಿಂದ ಆಯೋಜಿಸಿರುವ “ಜ್ಞಾನ ವಿಕಾಸ” ಅಭಿಯಾನಕ್ಕೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನೆಲಸಿರುವ ಲೇಖಕಿ, ಸಂಗೀತ ವಿಧೂಷಿ ಮಯಾ ಬಾಲಚಂದ್ರ ಅವರ ನಿವಾಸದಿಂದ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ.ಅನಂತರಾಮ್ ಅವರಿಗೆ ಪುಸ್ತಕ ಪ್ರಿಯರು ಕೆಲವು ಕೃತಿಗಳನ್ನು ನೀಡಿ ಅಭಿಯನಕ್ಕೆ ಸಹಕಾರ ವ್ಯಕ್ತಪಡಿಸಿದರು. ಶ್ರೀನಿವಾಸಪುರ ತಾಲೂಕು ಕನ್ನಡ ಸಂಘದ ಅಧ್ಯಕ್ಷೆ ಪಿ.ಎಸ್.ಮಂಜುಳ, ಸಾಹಿತಿ ಆರ್.ಚೌಡರೆಡ್ಡಿ, ಮನ್ವಂತರ ಪ್ರಕಾಶನದ ಸಂಚಾಲಕ ಎಸ್.ಎನ್.ಪ್ರಕಾಶ್ ಇನ್ನಿತರರು ಇದ್ದರು.