ಕೋಲಾರ:- ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಾಲಿ ಖಾಲಿ ಇರುವ 5120 ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮವಹಿಸುವುದಾಗಿ ಸದನದಲ್ಲಿ ಭರವಸೆ ನೀಡಿದರು.
ಖಾಲಿ ಇರುವ 5120 ಹುದ್ದೆಗಳಲ್ಲಿ 3794 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಬೇಕಾಗಿದ್ದು, ಶೀಘ್ರ ಅನುಮೋದನೆ ಪಡೆದು ಪ್ರಕ್ರಿಯೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಸದನದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಅನುದಾನಿತ ಶಾಲೆಗಳಲಿಗೆ 1326 ಬೋಧಕ ಹುದ್ದೆಗಳ ಭರ್ತಿಗೆ ಕಳೆದ 2015 ರ ಹಿಂದೆಯೇ ಅನುಮತಿ ನೀಡಲಾಗಿದೆ ಆದರೆ ಖಾಸಗಿ ಶಾಲೆಗಳ ಕೆಲವೊಂದು ನಿಮಯಗಳಿಂದಾಗಿ ಹುದ್ದೆಗಳು ಭರ್ತಿಯಾಗಿಲ್ಲ ಅದರ ಜತೆಗೆ ಇದೀಗ ಖಾಲಿ ಇರುವ 3794 ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿ ಮಾತನಾಡಿದ ಡಾ.ವೈ.ಎ.ಎನ್, 2021ರ ಅಂತ್ಯದವರೆಗೆ ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚಿನ ಬೋಧಕ ಹುದ್ದೆಗಳು ಖಾಲಿ ಇದೆ, ಆದರೂ 2020ರ ಹಿಂದೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕ್ರಮ ಕೈಗೊಳ್ಳಿ ಎಂದರು.