ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೌಶಲ್ಯಯುತ ಸಮಾಜ ನಿರ್ಮಿಸುವ ಸಲುವಾಗಿ ಆರ್ಸೆಟಿ ತರಬೇತಿ ಸಂಸ್ಥೆಯು ಮತ್ತಷ್ಟು ನೂತನ ಕೌಶಲ್ಯಾಧಾರಿತಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಎನ್.ಎಂ.ನಾಗರಾಜ್ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಜಿಲ್ಲಾ ಆರ್ಸೆಟಿ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಸ್ವ ಉದ್ಯೋಗ ಕೈಗೊಳ್ಳುತ್ತಿರುವ ಹಲವರಲ್ಲಿ ಕೌಶಲ್ಯದ ಕೊರತೆಯಿಂದ ಉದ್ದಿಮೆ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ನಷ್ಟ ಹೊಂದಿ, ಉದ್ಯಮವನ್ನು ಮುಚ್ಚುವ ಹಂತಕ್ಕೆತಲುಪುತ್ತಿದ್ದಾರೆ. ಆದ್ದರಿಂದ ಅಂತವರಿಗೆ ಮಾರ್ಗದರ್ಶನ, ಸಲಹೆ ಹಾಗೂ ಕೌಶಲ್ಯ ನೀಡುವ ಕೆಲಸವನ್ನು ತರಬೇತಿ ಸಂಸ್ಥೆ ಮಾಡಬೇಕು ಎಂದು ತಿಳಿಸಿದರು.
ಪ್ರಸ್ತುತ ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ರೇಷ್ಮೆ ವಲಯವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಕಷ್ಟು ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ ತರಬೇತಿ ಸಂಸ್ಥೆಯು ಹೈನುಗಾರಿಕೆ, ಎರೆಹುಳುಗೊಬ್ಬರ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಅಣಬೆ ಬೇಸಾಯ ಸೇರಿದಂತೆ ಮತ್ತಿತರ ವಲಯಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ತರಬೇತಿ ನೀಡುವ ಮೂಲಕ ಸ್ವ ಉದ್ಯೋಗಿಗಳಿಗೆ ಆಸರೆಯಾಗಿ ನಿಲ್ಲಬೇಕು ಎಂದರು.
ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿರುವ ಅರ್ಹರಿಗೆ ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡುವ ಮೂಲಕ ಅವರ ಜೀವನಕ್ಕೊಂದು ದಾರಿ ತೋರಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಮರ್ಜಿತ್ ಕುಮಾರ್ ಸಿಂಗ್ ಮಾತನಾಡಿ, ಉದ್ಯಮ ರಂಗ ಬೆಳವಣಿಗೆಗೆ ಕೆನರಾ ಬ್ಯಾಂಕ್ ಪ್ರಾರಂಭದಿಂದಲೂ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಮುದ್ರಾ ಪಿ.ಎಂ.ಇ.ಜಿ.ಪಿ ಹಾಗೂ ಎಂ.ಎಸ್.ಎಂ.ಇ ಯೋಜನೆಗಳ ಮೂಲಕ ನೂರಾರು ಕೋಟಿ ಸಾಲವನ್ನು ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವವರು ನೀಡಲಾಗಿದೆ. ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಸಾಲಕ್ಕಾಗಿ ಸಂಬಂಧಿಸಿದ ಬ್ಯಾಂಕ್ ಗಳನ್ನು ಸಂಪರ್ಕಿಸಿ, ಸಾಲ ಪಡೆದು ಸ್ವಾವಲಂಭಿಗಳಾಗಬಹುದು ಎಂದು ತಿಳಿಸಿದರು.
ನಬಾರ್ಡ್ ಬ್ಯಾಂಕ್ ನ ಡಿ.ಡಿ.ಎಂ ಎಂ.ಆರ್ ನಟರಾಜನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೌಶಲ್ಯ ಗುಣ ಹೆಚ್ಚಿಸಲು ಹಾಗೂ ಸ್ವ ಉದ್ಯೋಗ ಸೃಷ್ಟಿ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚಯ್ಯ ರಾಪೂರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪದೇವಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಶ್ರೀನಿವಾಸರೆಡ್ಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ವ್ಯವಸ್ಥಾಪಕರಾದ ಸಂಗಮೇಶ್, ಸದಾನಂದ, ಕೌಶಾಲ್ಯಭಿವೃದ್ದಿ ಇಲಾಖೆಯ ಅಧಿಕಾರಿ ಎನ್.ಎನ್ ಗೋವಿಂದ ಮೂರ್ತಿ, ಕೆನರಾ ಬ್ಯಾಂಕ್ ಮ್ಯಾನೇಜರ್ ಉಪೇಂದ್ರನಾಥ್, ತರಬೇತಿ ಸಂಸ್ಥೆಯ ನಿರ್ದೇಶಕ ಎಂ. ಬಾಲಾಜಿ, ಆರ್ಥಿಕ ಸಾಕ್ಷಾರತ ಕೇಂದ್ರದ ವಿಶಾಲಾಕ್ಷಿ ಉಪಸ್ಥಿತರಿದ್ದರು.