ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ನಿಗಧಿ ಮಾಡುವ ಮೂಲಕ ಜನಾಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಿದೆ ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ಬಜೆಟ್ನಲ್ಲಿ 1 ಸಾವಿರ ಕೋಟಿ ಇಟ್ಟಿರುವುದು ಸ್ವಾಗತಾರ್ಹವಾದರೂ ಮೊದಲು ಕೇಂದ್ರ,ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು, ಒಟ್ಟಾರೆ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯ ಜನಾಭಿಪ್ರಾಯಕ್ಕೆ ರಾಜ್ಯಬಜೆಟ್ನಲ್ಲಿ ಮನ್ನಣೆ ಸಿಕ್ಕಿದಂತಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಯಶಸ್ವಿನಿ ಯೋಜನೆ ಮರುಜಾರಿಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ, ಇದು ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್.ಎಂ.ಕೃಷ್ಣ ಜಾರಿಗೆ ತಂದಿದ್ದ ಯೋಜನೆಯಾಗಿದೆ. ಎತ್ತಿನಹೊಳೆಗೆ ಹಣ ನಿಗಧಿ ಸ್ವಾಗತಾರ್ಹ ಆದರೆ ಯೋಜನೆ ಮುಗಿಸಲು ಕಾಲಮಿತಿ ಹಾಕಬೇಕು ಎಂದಿದ್ದಾರೆ.
ಕೆಸಿ ವ್ಯಾಲಿ 2ನೇ ಹಂತಕ್ಕೆ 450 ಕೋಟಿ ರೂ, ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ ನಿಗಧಿ ಮಾಡಿರುವು ಸ್ವಾಗತಾರ್ಹ ಆದರೆ ಯೋಜನೆ ಸ್ಥಗಿತಗೊಂಡಂತಾಗಿದೆ, ಇದಕ್ಕೆ ಕಾಯಕಲ್ಪ ನೀಡಿ ಕಾಲಮಿತಿಯಲ್ಲಿ ಮುಗಿಯುವಂತೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಉತ್ತರ ವಿವಿಗೆ ಮೂಲಸೌಲಭ್ಯ ಒದಗಿಸುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪ ಇಲ್ಲದಿರುವುದು ಬೇಸರ ಮೂಡಿಸಿದೆ, ಸರ್ಕಾರ ವಿವಿ ಸಮಗ್ರ ಅಭಿವೃದ್ದಿಗೆ ಅನುದಾನ ನಿಗಧಿ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಡ್ರಿಪ್ ಇರಿಗೇಷನ್ಗೆ ಶೇ.100 ಸಬ್ಸಿಡಿ ನೀಡಬೇಕು, ಪರಿಶಿಷ್ಟ ಜಾತಿ ಸಮುದಾಯಗಳಿಗೆ ದೊಡ್ಡಪ್ರಮಾಣದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ನಿರೀಕ್ಷಿಸಿದ್ದು, ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.