ಇವರೆಲ್ಲಾ ಯಾವುದೇ ಪ್ಯಾಕೇಜ್ ದೊರೆಯದ ವರ್ಗದವರು, ಇವರಿಗೆ ಯಾರು ಗತಿ?

ಬರಹ: ಆಲ್ವಿನ್ ಅಂದ್ರಾದೆ, ಸಾಸ್ತಾನ


ಸಮಾಜದಲ್ಲಿ ಜಾತಿ ಮತ ಮೀರಿದ ಒಂದು ವರ್ಗ ಇದೆ, ಅವರೇ ಶುಭಸಮಾರಂಭಗಳ ಬೇಡಿಕೆಗಳನ್ನು ಪೂರೈಸುವವರು. ಮುಖ್ಯವಾಗಿ ಉಟೋಪಚಾರದ ವ್ಯವಸ್ಥೆ ಮಾಡುವವರು, ಬಡಿಸುವವರು, ಧ್ವನಿ ಮತ್ತು ಬೆಳಕು ಒದಗಿಸುವವರು, ಛಾಯಾಗ್ರಾಹಕರು, ಡೇಕೋರೇಟರ್ಸ್, ವಾದ್ಯದವರು, ಶಾಮಿಯಾನದವರು, ಪುರೋಹಿತರು, ಸಭಾಂಗಣ ಹಾಗೂ ಹೋಟೆಲ್ ಮಾಲಕರು ಹಾಗೂ ಕಾರ್ಮಿಕರು, ಕಾರ್ಯಕ್ರಮ ನಿರ್ವಾಹಕರು, ಟ್ಯೂರಿಸ್ಟ್ ವಾಹನ ಚಾಲಕ ಮಾಲಕರು, ವಾದ್ಯ ಮತ್ತು ಆರ್ಕೆಸ್ಟ್ರಾದವರು, ಕಲಾವಿದರು ಹೀಗೆ ಹಲವಾರು ರೀತಿಯಲ್ಲಿ ಕೇವಲ ಸಭೆ ಸಮಾರಂಭಗಳನ್ನೇ ನಂಬಿ ಬದುಕು ಸಾಗಿಸುವ ಅದೆಷ್ಟೋ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ…
ಪ್ರತಿ ವರ್ಷ ಕಾರ್ಯಕ್ರಮಗಳ ಸೀಸನ್ ಪ್ರಾರಂಭ ಆಗುವ ಮೊದಲು ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಿ ಮುಂದಿನ ಸೀಸನ್ ನಲ್ಲಿ ದುಡಿಯಲು ಸಿದ್ಧರಾಗಿರುತ್ತಾರೆ. ಯಾವುದೇ ಪರಿಸರದಲ್ಲಿ ಒಂದು ಸಮಾರಂಭ ನಡೆದರೇ ಇಂತಹ ನೂರಾರು ಜನರಿಗೆ ಉದ್ಯೋಗ ಸಿಗುತ್ತದೆ. ಇಡೀ ವರ್ಷದಲ್ಲಿ ನಡೆಯುವ ಕಾರ್ಯಕ್ರಮಗಳು ಇವರ ದೈನಂದಿನ ಹಾಗೂ ಕೌಟುಂಬಿಕ ಖರ್ಚು ವೆಚ್ಚಗಳಿಗೆ ಸರಿ ಹೋದರೆ, ಏಪ್ರಿಲ್ ಮೇ ಈ ಎರಡು ತಿಂಗಳಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಒಂದಿಷ್ಟು ಸಂಪಾದಿಸಿ ಮುಂದಿನ 4 ತಿಂಗಳುಗಳ ಮಳೆಗಾಲ ಕಳೆಯಲು ಒಂದಿಷ್ಟು ಹಣ ಕೂಡಿಡಲು ಪ್ರಯತ್ನಿಸುತ್ತಾರೆ
ಅದರ ಮಧ್ಯೆ ಸಾಲದ ಕಂತು, ಮನೆಯವರ ಬೇಡಿಕೆ, ಅಕ್ಕ ತಂಗಿ ಮದುವೆ, ಕಾಯಿಲೆ ಬಿದ್ದವರ ಖರ್ಚು ವಾಹನಗಳ ನಿರ್ವಹಣೆ ಹಾಗೂ ಇನ್ನಿತರ ಖರ್ಚುಗಳನ್ನು ಸರಿತೂಗಿಸಿ ಅಲ್ಪ ಸ್ವಲ್ಪ ಸಾಲ ಮಾಡಿ, ಅಲ್ಪ ಸ್ವಲ್ಪ ಕುಡಿಟ್ಟೂ ಹೇಗೋ ಜೀವನ ಸಾಗಿಸುತ್ತಿರುತ್ತಾರೆ…
ಆದರೆ ಈಗ ನಾವೆಲ್ಲರು ಕಂಡು ಕೇಳರಿಯದ ಕೊರೊನಾ ಕಾಯಿಲೆಯಿಂದ ಈ ಎಲ್ಲಾ ಶ್ರಮಜೀವಿಗಳ ಎರಡು ಸೀಸನ್ ಗಳು ಕೊಚ್ಚಿ ಹೋಗಿ,ಇವರ ಜೀವನ ಅಸ್ತವ್ಯಸ್ತವಾಗಿದೆ, ಇದರಿಂದಾಗಿ ಕಳೆದ ಒಂದು ವರ್ಷದಿಂದ ಎಲ್ಲರೂ ದಿಕ್ಕು ತೋಚದೆ ಕಂಗೆಟ್ಟಿದ್ದಾರೆ. ಕಳೆದ ಒಂದು ಸೀಸನ್ ಕೈಕೊಟ್ಟಾಗ ಹೇಗೋ ಸಾವರಿಸಿ ಎದ್ದು ನಿಲ್ಲಲು ಪ್ರಯತ್ನ ಪಟ್ಟ ಸಮಯದಲ್ಲೆ ಪುನ: ಈಗ ಎರಡನೇ ಅಲೆ ಎದ್ದು, ಲಾಕ್ ಡೌನ್ ಮದುವೆ,ಸಮಾರಂಭಗಳು ಇಲ್ಲದೆ ಇನ್ನಿಲ್ಲದ ಪ್ರಹಾರ ನೀಡಿದೆ.ಇನ್ನು ಮುಂದೆ ಮುಂದಿನ ಮೂರು ತಿಂಗಳ ಮಳೆಗಾಲ ಇವರ ಕಣ್ಣಮುಂದಿದೆ.ಯಾರ ಬಳಿಯೂ ಸಹಾಯಕ್ಕೆ ಯಾಚಿಸದೇ ಗೌರವಾನ್ವಿತ ಬದುಕು ಸಾಗಿಸುತ್ತಿದ್ದ ಇವರ ಬದುಕು ಇಂದು ಸಂಕಷ್ಟದಲ್ಲಿದೆ.ಸರಕಾರದ ಯಾವ ಯೋಜನೆಗಳಲ್ಲೂ, ಅಥವಾ ಸಂಕಷ್ಟದಲ್ಲಿ ಇರುವವರ ಪಟ್ಟಿಯಲ್ಲಿ ಇಂಥಹ ವ್ರತ್ತಿ,ಉದ್ಯೋಗ ಮಾಡುವರ ಗಣನೆಗೆ ಮಾಡದಿದದ್ದು, ಇವರ ವ್ಯಥೆಯಾಗಿದೆ. ಯಾಕೆಂದರೆ ಯಾಕೆಂದರೇ ಇವರು ಎಲ್ಲೂ ತೋರಿಸಿಕೊಳ್ಳುವುದಿಲ್ಲಾ….
ಯಾವುದೇ ಸಮಾರಂಭಗಳಲ್ಲಿ ಎಷ್ಟೇ ಕಷ್ಟವಾದರೂ ಆ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಗೊಳಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡುವ ಇವರ ಬದುಕು ಇಂದು ಸಂಪೂರ್ಣ ಕಳೆಗುಂದಿ ಅಸ್ತ ವ್ಯಸ್ತವಾಗಿದೆ. ಸರಕಾರದಿಂದ ಎಷ್ಟೇ ಕೋಟಿಯ ಪ್ಯಾಕೇಜ್ ಬಂದರು ಕೂಡ ಇವರ ಹೆಸರು ಅದರಲ್ಲಿ ಕಾಣಿಸದಿದದ್ದು ವಿಪರ್ಯಾಸವೇ ಸರಿ.
ಸರ್ಕಾರ ಎನೊಂದು ಪರಿಹಾರ ನೀಡದಿದ್ದಲ್ಲಿ, ಬಹುಶಃ ಕಾಣದಿರುವ ಶಕ್ತಿಯೇ ಇವರೆಲ್ಲರನ್ನೂ ಕಾಪಾಡಲಿ ಬೇಕು ಹಾಗೂ ಮುಂದೆ ನಡೆಯುವ ಎಲ್ಲಾ ಸಮಾರಂಭಗಳನ್ನು ಯಶಸ್ವಿಗೊಳಿಸುವ ಶಕ್ತಿ ಆ ದೇವರು ಇವರಿಗೆಲ್ಲಾ ಕರುಣಿಸಲಿ ಅನ್ನೋದಷ್ಟೇ ಹಾರೈಕೆ.
.