ಸಹಾಯ ಮಾಡುವಾಗ ಜಾತಿ,ಪಕ್ಷವಲ್ಲ, ಮಾನವತ್ವ ಇರಬೇಕು ನನಗೆ ಗೌಡರಿಗೆ ಗಿಲಿಟ್ ರಾಜಕಾರಣ ಗೊತ್ತಿಲ್ಲ-ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಹಾಯ ಮಾಡುವಾಗ ಜಾತಿ,ಪಕ್ಷ ಮುಖ್ಯವಲ್ಲ ಮಾನವತ್ವ ಇರಬೇಕು ಎಂಬ ಭಾವನೆಯಿಂದ ನಾನು,ಶ್ರೀನಿವಾಸಗೌಡರು ಕೆಲಸ ಮಾಡಲು ಬಂದವರು, ನಮಗೆ ಗಿಲಿಟ್ ರಾಜಕಾರಣ ಗೊತ್ತಿಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಹೋಳೂರು ಸೊಸೈಟಿ ಆವರಣದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ 1.5 ಕೋಟಿ ರೂ ಕೆಸಿಸಿ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಾನು ನಂಬಿರುವ ಬಾಬಾರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇಂತಹ ಸಾಮಾಜಿಕ ಕೆಲಸಗಳಲ್ಲಿ ಎಂದು ಜಾತಿ ಪಕ್ಷ ನೋಡುವುದಿಲ್ಲ ಆದರೆ ಕೆಲವರಿಗೆ ಕೂತರೆ,ನಿಂತರೆ ಅದೇ ಚಿಂತೆ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ಶ್ರೀನಿವಾಸಗೌಡರದ್ದು ಎಳೆ ಮಗುವಿನ ಮನಸ್ಸು, ಇಂತಹವರು ರಾಜಕಾರಣದಲ್ಲಿ ಇದ್ದರೆ ಮಾತ್ರ ರಾಜಕಾರಣಕ್ಕೆ ಗೌರವ ಎಂದ ಅವರು, ನಮ್ಮ ಬಗ್ಗೆ ಕೆಲವರಿಗೆ ಹೊಟ್ಟೆಉರಿ, ಏನು ಮಾಡುವುದು ಕ್ಯಾನ್ಸರ್‍ಗೆ ಔಷಧಿ ಇದೆ, ಅಸೂಯೆಗೆ ಔಷಧಿ ಇಲ್ಲ ಎಂದರು.
ಮಕ್ಕಳಾಗದೇ ಇರೋರಿಗೆ ಮಕ್ಕಳಾಗೋರ ಬಗ್ಗೆ ಹೊಟ್ಟೆ ಉರಿ, ಏನು ಮಾಡೋದು ನನಗೆ ವರ್ಷಕ್ಕೊಂದು ಮಗು ಆಗುತ್ತಿದೆ, ಕೆಸಿ ವ್ಯಾಲಿ ಆಯಿತು, ಎತ್ತಿನಹೊಳೆ ಆಯಿತು, ವಸತಿ ಯೋಜನೆ,ಈ ಸ್ತ್ರೀಶಕ್ತಿ ಸಂಘಗಳಿಗೆ,ರೈತರಿಗೆ ಸಾಲಯೋಜನೆ ಹೀಗೆ ಎಂದು ತಿಳಿಸಿ ಅಭಿವೃದ್ದಿ ಕೆಲಸಗಳಿಗೆ ಅರ್ಜಿ ಹಾಕಿ ಅಡ್ಡಿಪಡಿಸುವವರ ವಿರುದ್ದ ವ್ಯಂಗ್ಯವಾಗಿ ಕಿಡಿಕಾರಿದರು.


ಬ್ಯಾಂಕ್ ವಿರುದ್ದದಟೀಕೆಗೆ ತಿರುಗೇಟು


ಮಡಿಕೆ ಚೂರುಗಳಾಗಿದ್ದ ಡಿಸಿಸಿ ಬ್ಯಾಂಕನ್ನು ಗೋವಿಂದಗೌಡರು ಸುಂದರ ಮಡಿಕೆ ಮಾಡಿದ್ದಾರೆ, ಅದನ್ನು ಹೇಗೆ ಹಾಳು ಮಾಡೋದು ಎಂಬ ಚಿಂತೆ ಕೆಲವರನ್ನು ಕಾಡುತ್ತಿದೆ ಇಂತಹವರಿಗೆ ದೇವರೇ ಒಳ್ಳೆಯ ಬುದ್ದಿ ಕೊಡಬೇಕು, ಇಲ್ಲವಾದರೆ ಜನ ಎಂದಿಗೂ ಕ್ಷಮಿಸಲ್ಲ ಎಂದು ಡಿಸಿಸಿ ಬ್ಯಾಂಕ್ ವಿರುದ್ದದ ಟೀಕಾಕಾರರಿಗೆ ಎಚ್ಚರಿಕೆ ನೀಡಿದರು.
ಹೋಳೂರು ಸೊಸೈಟಿ ಸಾಲ ನೀಡಿಕೆಯಲ್ಲಿ ನಿರ್ಲಕ್ಷ್ಯತೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಮೇಶ್‍ಕುಮಾರ್, ಹೊಸ ಸದಸ್ಯರೂ ಇಲ್ಲ, ಜನರಿಗೆ ಪ್ರಯೋಜನವೂ ಇಲ್ಲ ಇಂತಹ ಸೊಸೈಟಿ ಬೇಕಾ ಎಂದು ಪ್ರಶ್ನಿಸಿ, ಎಷ್ಟು ಸಾಲ ನೀಡಿದೆವು ಎಂಬುದಕ್ಕಿಂತ ಎಷ್ಟು ಕುಟುಂಬಗಳಿಗೆ ಸಾಲ ಕೊಟ್ಟೆವು ಎಂಬುದು ಮುಖ್ಯ, ಹೋಳೂರು ಸೊಸೈಟಿ ವ್ಯಾಪ್ತಿಯ 25 ಹಳ್ಳಿಗಳ ಪ್ರತಿ ಕುಟುಂಬವೂ ಸೊಸೈಟಿ ಸದಸ್ಯತ್ವ ಪಡೆಯುವಂತೆ ಮಾಡಿ ಎಂದು ಸೂಚಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರ ನೆರವಿಗೆ ನಿಲ್ಲುತ್ತೇನೆ, ಪ್ರತಿ ಜಿಲ್ಲೆಯಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ರೈತರೇ ಸದಸ್ಯರಾಗಿರುವ ಸಮಿತಿ ರಚಿಸಿ, ಬೆಳೆಯುವ ಬೆಳೆಯ ಖರ್ಚು ಲೆಕ್ಕ ಹಾಕಿ ರೈತರಿಗೆ ನಷ್ಟವಾಗದಂತೆ ಬೆಳೆಗಳಿಗೆ ಬೆಲೆ ನಿಗಧಿ ಮಾಡುವ ಕುರಿತು ಗೆಜೆಟ್‍ನಲ್ಲಿ ಪ್ರಕಟಣೆ ಹೊರಡಿಸಿ ಕಾರ್ಯಗತ ಮಾಡುವುದಾಗಿ ಘೋಷಿಸಿದರು.


ಗೆಲುವಿಗೆ ಕಾರಣ ರಮೇಶ್‍ಕುಮಾರ್


ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನನ್ನ ಗೆಲುವಿಗೆ ರಮೇಶ್ ಕುಮಾರ್ ಕಾರಣ,ಅವರ ಕ್ಷೇತ್ರ ಬಿಟ್ಟು ನನ್ನಪರ ಕೆಲಸ ಮಾಡಿದರು ಎಂದು ಸ್ಮರಿಸಿ, ಹೋಳೂರು ಹೋಬಳಿ ಸದಾ ನನ್ನ ಬೆನ್ನೆಲುಬಾಗಿ ನನಗೆ ಬೆಂಬಲ ನೀಡಿದೆ ಎಂದರು.
ಬ್ಯಾಲಹಳ್ಳಿ ಗೋವಿಂದಗೌಡರಿಂದ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂ.1 ಆಗಿದೆ, 2 ಜಿಲ್ಲೆಗಳ ರೈತರು,ಮಹಿಳೆಯರ ಬದುಕಿಗೆ ಆಸರೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಇಂದಿನ ರಾಜಕಾರಣ ನಮ್ಮಂತಹವರಿಗಲ್ಲ, ದರೋಡೆ ಕೋರರಿಗೆ ಎಂಬಂತಾಗುತ್ತಿದೆ ಎಂದು ವಿಷಾದಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಹೋಳೂರು ಸೊಸೈಟಿ ಸಿಇಒ ಮತ್ತು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ಪಕ್ಕದ ಅಣ್ಣಿಹಳ್ಳಿ ಸೊಸೈಟಿಯಲ್ಲಿ 500 ಎಸ್‍ಎಸ್‍ಜಿಗಳ ರಚನೆಯಾಗಿ ಸಾಲ ನೀಡಿದ್ದೇವೆ, ನಿಮಗೆ ಕೆಲಸ ಮಾಡಲು ಏನು ಕಷ್ಟ ಎಂದು ಪ್ರಶ್ನಿಸಿದರು.
ಸೊಸೈಟಿ ಗಣಕೀಕರಣ ಮುಗಿಸಿಲ್ಲ, ಸಾಲ ನೀಡಲ್ಲ, ನಿಮಗೆ ಬಡವರಿಗೆ ನೆರವಾಗುವ ಇಚ್ಚಾಶಕ್ತಿ ಇಲ್ಲ ಎಂದು ಟೀಕಿಸಿ, ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಎಟಿಎಂ ಮೂಲಕವೇ ಡ್ರಾಗೆ ಅವಕಾಶ ಕಲ್ಪಿಸಲಾಗಿದೆ, ಭ್ರಷ್ಟತೆಗೆ ಎಡೆ ಇಲ್ಲ, ಆದರೂ ಈ ವ್ಯವಸ್ಥೆ ಮೇಲೆ ಟೀಕೆ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಕೋಚಿಮುಲ್ ಮಾಜಿ ನಿರ್ದೇಶಕ ಬ್ಯಾಟಪ್ಪ, ಪಕ್ಷಬೇಧವಿಲ್ಲದೇ ಮಹಿಳಾ ಸಂಘಗಳನ್ನು ರಚಿಸಿ, ರೈತರು ಸೇರಿದಂತೆ 10 ಕೋಟಿ ರೂ ಸಾಲ ನೀಡುವಂತಾಗಬೇಕು, ಎಂದು ತಿಳಿಸಿ ಹೋಳೂರು ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅರ್ಜಿ ಹಾಕಿ ಕಿರಿಕಿರಿಯುಂಟು ಮಾಡುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‍ಕುಮಾರ್, ವೆಂಕಟರೆಡ್ಡಿ, ಎಸ್.ವಿ.ಸುಧಾಕರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್,ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ಸೊಣ್ಣೇಗೌಡ,ಕೃಷ್ಣಾರೆಡ್ಡಿ, ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ನೆನುಮನಹಳ್ಳಿ ಚಂದ್ರಶೇಖರ್,ಎಂ.ವಿ.ಮಂಜುನಾಥ್,ರಾಮಚಂದ್ರಪ್ಪ, ಶ್ರೀನಿವಾಸರೆಡ್ಡಿ, ಮುನೇಗೌಡ, ನುಕ್ಕನಹಳ್ಳಿ ಶ್ರೀನಿವಾಸ್, ವೆಂಕಟೇಶಪ್ಪ, ಶ್ರೀರಾಮಮಪ್ಪ, ಸೊಸೈಟಿ ಸಿಇಒ ನಾರಾಯಣರೆಡ್ಡಿ ಮತ್ತಿತರರಿದ್ದರು.