ಕೋಲಾರ ಕೋವಿಡ್ 2ನೇ ಅಲೆ; ಸರ್ಕಾರಿ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯಿಲ್ಲ ಆಗ್ರ ರೈತಸಂಘದ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ; ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಜಿಲ್ಲೆಯ ಸರ್ಕಾರಿ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯಿಲ್ಲದೆ ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸಿ ರೈತಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ ಮೊದಲನೇ ಅಲೆಯಿಂದಲೇ ಸಾಕಷ್ಟು ತತ್ತರಿಸಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿರುವ ಬೆನ್ನಲ್ಲಿಯೇ 2ನೇ ಅಲೆಯು ಆವರಿಸಿದ್ದು, ಜನತೆಯು ಮತ್ತಷ್ಟು ಆತಂಕ್ಕೆ ಒಳಗಾಗುವಂತಾಗಿದೆ.
ದೇಶದಲ್ಲಿ ಪ್ರತಿನಿತ್ಯ ಸರಾಸರಿ 2 ಲಕ್ಷ ಪ್ರಕಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿಯೂ ನಿತ್ಯ 80 ರಿಂದ 120 ಪ್ರಕರಣಗಳು ಪತ್ತೆಯಾಗುತ್ತಿವೆ. ಆ ಪ್ರಕರಣಗಳ ಪೈಕಿ ಬಹುತೇಕರಿಗೆ ಉಸಿರಾಟದ ಸಮಸ್ಯೆಯಿರುವುದರಿಂದಾಗಿ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಆರ್‍ಎಲ್ ಜಾಲಪ್ಪ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
ಅಲ್ಲಿಯೂ ಕೋವಿಡ್ ಭಯದಿಂದಾಗಿ ಚಿಕಿತ್ಸೆ ನೀಡಲಾಗದೆ ಬೆಂಗಳೂರಿಗೆ ಹೋಗುವಂತೆ ಸೂಚನೆ ನೀಡಲಾಗುತ್ತಿದೆ ಎಂದು ದೂರಿದರು.
ಇದರಿಂದಾಗಿ ಅನೇಕರು ಬೆಂಗಳೂರಿಗೆ ಹೋಗಿ ಅಲ್ಲಿ ಬೆಡ್, ಲಸಿಕೆ ಮತ್ತಿತರ ವ್ಯವಸ್ಥೆಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಸಾಮಾನ್ಯ ಜನರು ಲಕ್ಷ ಲಕ್ಷ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಮಾತನಾಡಿ, ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಿದ್ದರೂ ಅದಕ್ಕೆ ತಕ್ಕ ಸಿಬ್ಬಂದಿ ಇಲ್ಲದಿರುವುದರಿಂದ ಆರ್‍ಎಲ್ ಜಾಲಪ್ಪ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವಂತಾಗಿದೆ. ಅವರೂ ಸಹ ಮಾನವೀಯತೆಯಿಂದ ಸ್ಪಂದಿಸಿ ಚಿಕಿತ್ಸೆ ಕಲ್ಪಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದು, ಜನರಿಗೆ ಕೋವಿಡ್ ಆತಂಕದ ನಡುವೆ ಚಿತ್ರಹಿಂಸೆ ನೀಡಿದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿಯಲ್ಲಿಯೂ ಜನರ ಆರೋಗ್ಯ ಕಾಪಾಡದೆ ಈ ರೀತಿಯಾಗಿ ವರ್ತಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದು, ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು ಜಿಲ್ಲೆಯಲ್ಲೇ ವೆಂಟಿಲೇಟರ್ ಇನ್ನಿತರೆ ವ್ಯವಸ್ಥೆಗಳನ್ನು ಮಾಡಲು ಸೂಚನೆ ನೀಡಿ ಜನರಿಗೆ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ, ಈ ಬಗ್ಗೆ ಶೀಘ್ರದಲ್ಲೇ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಮಂಗಸಂದ್ರ ನಾಗೇಶ್, ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪ್ರಸನ್ನ, ಅನಿಲ್ ಉಪಸ್ಥಿತರಿದ್ದರು
.