ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ :- ಪೂರ್ವ ಮುಂಗಾರು ಪ್ರಾರಂಭವಾಗಿರುವುದರಿಂದ , ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಯಲ್ಲಿ ಅಭಾವವಿಲ್ಲ . ಈ ವರ್ಷ ವಾಡಿಕೆ ಮಳೆಗಿಂತ ಶೇ . 35 ರಷ್ಟು ಹೆಚ್ಚಾಗಿದ್ದು , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ತಿಳಿಸಿದರು . ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 2021 ರ ಮುಂಗಾರು ಹಂಗಾಮಿನ ಸಿದ್ಧತೆಯ ಕುರಿತು ಜಿಲ್ಲೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆ ಆಗದಂತೆ ಕ್ರಮವಹಿಸಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು . ಬಿತ್ತನೆ ಬೀಜ , ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದರೆ ಅಥವಾ ಸರ್ಕಾರ ನಿಗಧಿ ಪಡಿಸಿದ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಅವರ ಪರವಾನಗಿಯನ್ನು 1 ವರ್ಷಗಳ ಕಾಲ ರದ್ದು ಪಡಿಸಿ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಕೃಷಿ ಅಧಿಕಾರಿಗಳು ರೈತರಿಗೆ ಸ್ನೇಹಿ ಆಗಿರಬೇಕು . ರೈತರ ಸಮಸ್ಯೆಗಳಿಗೆ ಕೃಷಿ ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳನ್ನು ಜಿಲ್ಲೆಗೆ ಕಳುಹಿಸಿ ಕೊಡಲಾಗುವುದು . ರೈತರ ಭೂಮಿಯ ಮಣ್ಣಿನ ಫಲವತ್ತತೆ , ನೀರಿನ ಸಮಸ್ಯೆ ಹಾಗೂ ಬೆಳೆಗಳಿಗೆ ರೋಗ ಬಂದರೆ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಮತ್ತು ಪ್ರೊಫೆಸರ್‌ಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು . ಸಣ್ಣ ರೈತರಿಗೆ ಟ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ . ಆದ್ದರಿಂದ ಸರ್ಕಾರ ಕೃಷಿ ಯಂತ್ರಧಾರೆಗಳಿಗೆ ಶೇ .70 ರಷ್ಟು ಸಬ್ಸಿಡಿ ನೀಡುತ್ತಿದೆ . ಕೃಷಿ ಯಂತ್ರಧಾರೆಗಳು ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕು . ಒಂದು ವೇಳೆ ಕಾರ್ಯನಿರ್ವಹಿಸದಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು . ಭಾರತ ದೇಶದಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಗಳ ಆಧಾರ್ ಜೋಡಣೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದರು . ಕೇಂದ್ರ ಸರ್ಕಾರದ ಎನ್.ಎಫ್.ಎಸ್.ಎಂ. ( ನ್ಯಾಷನಲ್ ಫುಡ್ ಸೆಕ್ಯೂರಿಟಿ ಮಿಷನ್ ) ಕನಸಿನ ಯೋಜನೆಯಾಗಿದೆ . ಈ ಯೋಜನೆಯಲ್ಲಿ ಬಹುಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಪಡೆಯಲು ಸರ್ಕಾರ ಕಾರ್ಯಕ್ರಮಗಳನ್ನು ಕೈಗೊಂಡಿದೆ . ಇದರ ಬಗ್ಗೆ ಮಾಹಿತಿಯನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ರೈತರು ಬೆಳೆದ ಬೆಳೆಯ ಸಮೀಕ್ಷೆಯನ್ನು ರೈತರೇ ಮಾಡಿ , ಅದನ್ನು ವೆಬ್‌ಸೈಟ್ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡುವಂತಾಗಬೇಕು . ಈ ಮಾಹಿತಿಯು ರೈತರಿಗೆ ಆರ್.ಟಿ.ಸಿ ಯಲ್ಲಿ ಸಹ ದೊರೆಯುವಂತೆ ಸರ್ಕಾರ ಕ್ರಮಕೈಗೊಂಡಿದೆ . ಈ ಕುರಿತು ಜಿಲ್ಲೆಯ ಎಲ್ಲಾ ರೈತರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು . ಜಂಟಿ ಕೃಷಿ ನಿರ್ದೇಶಕರಾದ ರೂಪಾದೇವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಮಳೆಗೆ ಯಾವುದೇ ಕೊರತೆಯಾಗಿಲ್ಲ . ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಮಳೆಯಾಗುತ್ತಿದೆ . ಬಿತ್ತನೆ ಬೀಜ , ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ . ಕೋವಿಡ್ ನಿಯಮಗಳನ್ನು ಪಾಲಿಸಿ , ರೈತರಿಗೆ ಸೋಮವಾರದಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತ ಸಂಪಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡುತ್ತೇವೆ ಎಂದು ಹೇಳಿದರು . ಜಿಲ್ಲೆಯು ಪೂರ್ವ ಕೃಷಿ ಒಣ ವಲಯವಾಗಿದ್ದು , ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 775 ಮಿ.ಮೀ. ಮಳೆಯಾಗುತ್ತಿದ್ದು , ಗರಿಷ್ಠ 1056 ಮಿ.ಮೀ. , ಕನಿಷ್ಠ 538 ಮಿ.ಮೀ. ಮಳೆಯಾಗಿದೆ . ಒಟ್ಟು 374966 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು , ನಿವ್ವಳ ಬಿತ್ತನೆ ಪ್ರದೇಶ 2,09,566 ಹೆಕ್ಟೇರ್ ಆಗಿದೆ . ಕೃಷಿ ಬೆಳೆಗಳ ವಿಸ್ತೀರ್ಣ 97900 ಹೆಕ್ಟರ್ ಆಗಿದೆ . ನೀರಾವರಿ ಪ್ರದೇಶ ( ನಿವ್ವಳ ) 51702 ಹೆಕ್ಟೇರ್ ಆಗಿದೆ . ಒಟ್ಟು 303475 ಹಿಡುವಳಿದಾರರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು . ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ರೈತರಿಗೆ ತೊಗರಿ ಬಿತ್ತನೆ ಬೀಜದ ಕಿರುಚೀಲಗಳನ್ನು ವಿತರಿಸಲಾಯಿತು . ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ಡಾ || ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ , ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಉಪವಿಭಾಗಾಧಿಕಾರಿ ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .