ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:- ನಾನು ಓದುವ ಸಮಯದಲ್ಲಿ ಹಣವಿಲ್ಲದೇ ಶಿಕ್ಷಣ ಪಡೆಯಲಿಲ್ಲ, ಆದರೂ ನಾನು ಹುಟ್ಟಿ ಬೆಳೆದ ಕ್ಷೇತ್ರದ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಮನೋಭಾವನೆಯಿಂದ ವಿದ್ಯೆ ಕಲಿತು ಜಿಲ್ಲೆಯ ಕೀರ್ತಿ ದೇಶದಲ್ಲಿ ಪ್ರಚಲಿಸಬೇಕಾಗಿದ್ದು, ಮೊದಲ ಹಂತದಲ್ಲಿ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಿದ್ದೇನೆ ಎಂದು ಸಮಾಜ ಸೇವಕ ಕೆ.ಜಿ.ಎಫ್ ಬಾಬು ತಿಳಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಕೋಲಾರ ವಿಧಾನಸಭಾ ಕ್ಷೇತ್ರದ 23 ಸಾವಿರ ವಿಧ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಆರು ತಿಂಗಳಿಗೆ ಒಮ್ಮೆ ಎರಡು ಸಾವಿರದಂತೆ ಒಟ್ಟು ತಲಾ 4 ಸಾವಿರ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಸಾಂಕೇತಿಕವಾಗಿ ಚೆಕ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹುಟ್ಟಿದ ನಾನು ಕೋಲಾರ ಮಣ್ಣಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ಬಂದಿದ್ದೇನೆ,ಯಾವುದೇ ಬೇರೆ ತರಹದ ಉದ್ದೇಶವಿಲ್ಲದೆ ಸಮಾಜ ಸೇವೆಯೆ ಮುಖ್ಯ ಉದ್ದೇಶ, ಯಾವುದೇ ರಾಜಕೀಯ ಪೇರಿತವಾಗಿ ಬಂದಿಲ್ಲ, ತಾಲ್ಲೂಕಿನ ಯುವಕರು ಒಳ್ಳೆಯ ಶಿಕ್ಷಣ ಪಡೆದು ಐ.ಎ.ಎಸ್ ಮತ್ತು ಐ.ಪಿ.ಎಸ್ ಗಳಾಗಿ ಹೊರಹೊಮ್ಮಲಿ ಎಂದರು.
ನನಗೆ ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸಿದ ಕಾಲದಲ್ಲಿ ನನ್ನ ಕುಟುಂಬ ನಿರ್ವಹಣೆ ಬಾಧೆಯಿಂದ ನಾನು ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ ಇವತ್ತು ದೇವರು ನಾಲ್ಕು ಜನಕ್ಕೆ ಸಹಾಯ ಮಾಡುವ ಶಕ್ತಿಯನ್ನು ನನಗೆ ನೀಡಿದ್ದು ತಾಲ್ಲೂಕಿನಲ್ಲಿ ಬಡತನವಿರಬಾರದು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಭೇಟಿ ನೀಡಿ ಜನರ ಕಷ್ಟದಲ್ಲಿ ಭಾಗಿಯಾಗುತ್ತೇನೆ ಎಂದರು.
ಭಾರತೀಯ ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ಬಿ.ಡಿ.ಎಸ್. ನಾರಾಯಣಸ್ವಾಮಿ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಪ್ರೋತ್ಸಾಹ ಧನ ಕೊಡುಗೆಯಾಗಿ ನೀಡುತ್ತಿರುವ ಕೆ.ಜಿ.ಎಫ್.ಬಾಬುರವರ ಸೇವೆ ಶ್ಲಾಘನೀಯ, ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿರುವ ಬಾಬುರವರಿಗೆ ನಾವು ಸದಾಕಾಲವೂ ಬೆಂಬಲವಾಗಿ ನಿಲ್ಲೋಣವೆಂದು ವಿದ್ಯಾರ್ಥಿಗಳ ಜೀವನ ರೂಪಿಸಲು ಅವರ ಸಂಪಾದನೆಯಲ್ಲಿ ಶೇ 25 ರಷ್ಟು ನೀಡುತ್ತಿದ್ದು,ಪ್ರತಿ ವರ್ಷ ಸುಮಾರು 9 ಕೋಟಿ ಖರ್ಚು ಮಾಡಲು ಯೋಜನೆ ರೂಪಿಸಿದ್ದು, ವಿದ್ಯಾರ್ಥಿಗಳು ಬಾಬುರವರು ನೀಡುವ ಪ್ರೋತ್ಸಾಹಧನದಿಂದ ಉತ್ತಮ ವಿದ್ಯೆ ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.
ವೇದಿಕೆಯಲ್ಲಿ ಛತ್ರಕೋಡಿಹಳ್ಳಿ ಸುರೇಶ್,ನಗರ ಸಭೆ ಮಾಜಿ ಸದಸ್ಯ ಜಾಫರ್,ಟಿಪ್ಪು ಸೇನೆಯ ಏಜಾಸ್, ಸಫೀರ್ ಅಹ್ಮದ್(ದಾಸ್ತಾನ್), ಭಾಯ್ ಜಾನ್, ಎಕ್ಬಾಲ್, ಅಂಜುಮಾನ್ ಉಪಾಧ್ಯಕ್ಷ ಇಲಿಯಾಸ್,ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ ಕೆ. ಮಂಜುನಾಥ್, ಬಷೀರ್, ಯೂನಸ್, ಅಫ್ಸರ್ ಖಾನ್ (ಟೈರ್), ಫಾಸಿಲ್ ಬೇಗ್, ಇಫ್ಸಾಲ್ ಆಲಿ ಖಾನ್, ಕಲಾವಿದ ಮತ್ತಿಕುಂಟೆ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.