ಶ್ರೀನಿವಾಸಪುರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಜಾಗೃತಿ ವೇದಿಕೆ, ಬಳ್ತಂಗಡಿ ಅಖಿಲ ಜನಜಾಗೃತಿ ವೇದಿಕೆ, ಡಿಜಿ ಯೋಜನೆ ಹಾಗೂ ಸ್ಥಳೀಯ ಉನ್ನತೀಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಶ್ಚಟಗಳು ಮನುಷ್ಯನ ಆತ್ಮಬಲ ಕುಗ್ಗಿಸುತ್ತವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಡಲು ಕಾರಣವಾಗುತ್ತವೆ. ಅಕ್ರಮ ಚಟುವಟಿಕೆ, ಅನೈತಿಕ ನಡವಳಿಕೆ ಮತ್ತು ಅಪರಾಧಕ್ಕೆ ಪ್ರೇರಣೆ ನೀಡುತ್ತವೆ. ಮನುಷ್ಯ ನೈತಿಕವಾಗಿ ಬೆಳೆಯಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸರಾಗಬಾರದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ ಆತ್ಮಗೌರವ ಹಾಗೂ ದೃಢ ಸಂಕಲ್ಪ ಇದ್ದಲ್ಲಿ ಯಾವುದೇ ದುಶ್ಚಟ ಹತ್ತಿರ ಸುಳಿಯುವುದಿಲ್ಲ. ಒಳ್ಳೆ ವ್ಯಕ್ತಿಗಳೊಂದಿಗೆ ಸ್ನೇಹ ಮಾಡಬೇಕು. ಉತ್ತಮ ವಿಚಾರಗಳ ಬಗ್ಗೆ ಚರ್ಚಿಸಬೇಕು. ಕೆಟ್ಟ ಯೋಚನೆಗಳು ಮನಸ್ಸಿಗೆ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರು ಹೇಳುವಂತೆ ಕುಡಿತ ಮತ್ತಿರ ದುಶ್ಚಟಗಳು ಮನುಷ್ಯನ ಆತ್ಮ ಕೊಲ್ಲುತ್ತವೆ. ದುಶ್ಚಟ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಸಮಾಜದಲ್ಲಿ ವ್ಯಕ್ತಿಗೌರವ ಸಿಗದಂತೆ ಮಾಡುತ್ತದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದಲ್ಲಿ, ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ವಾಸುದೇವ, ಗಿರಿಜಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿ, ಎಂಜಿನಿಯರ್ ಮಮತಾ ಕಾಂತರಾಜ್, ಡಿಜಿವೈ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ನರೇಶ್ ಇದ್ದರು.