ಶ್ರೀನಿವಾಸಪುರ: ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಕೋಲಾರದ ಕೃಷಿ ಸಂಸ್ಕøತಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಮರೆತ ಮಾನವೀಯ ಪರಂಪರೆಗೆ ಜೀವ ಕೊಟ್ಟ ಚೈತನ್ಯ ಶೀಲ ವ್ಯಕ್ತಿ. ಮಕ್ಕಳಿಗೆ ಅಕ್ಷರದ ಜತೆಗೆ ಆಲೋಚನೆ ಕಲಿಸಿದ ಮೇಷ್ಟ್ರು. ಮಾದರಿ ಖಾಸಗಿ ಶಾಲೆ ಕಟ್ಟಿ, ಪೋಷಕರಿಗೆ ಹೊರೆಯಾಗದಂತೆ, ಸರ್ಕಾರಿ ಶಾಲೆಯಂತೆ ಬೆಳೆಸಿದರು. ಸಮಾಜೋತ್ಪನ್ನ ಕಾರ್ಯಕ್ರಕ್ಕೆ ಮರುಜೀವ ನೀಡಿದರು. ಆ ಮೂಲಕ ವಿದ್ಯಾರ್ಥಿಗಳು ಓದಿನ ಬಳಿಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡಿದರು ಎಂದು ಹೇಳಿದರು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ, ನೆಲದ ಗುರುತು ಸರಣಿಯ ಮೊದಲ ಕೃತಿಯಾಗಿದೆ. ಈ ಕೃತಿ ಪ್ರತಿ ಮನೆಯ ದೀಪವಾಗಬೇಕು. ತಮ್ಮ ನಡೆಯ ಮೂಲಕ ಮಕ್ಕಳಲ್ಲಿ ಬದಲಾವರಣೆ ತಂದ ಎಂ.ಶ್ರೀರಾಮರೆಡ್ಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಅವರ ಆದರ್ಶದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಭೈರವೇಶ್ವರ ವಿಧ್ಯಾನಿಕೇತನದ ಅಭಿವೃದ್ಧಿಯ ಹಿಂದೆ ಶ್ರೀರಾಮರೆಡ್ಡಿ ಅವರ ಶ್ರಮ ಅಡಗಿದೆ. ತಮ್ಮ ಗಳಿಕೆಯ ಹಣ ಹಾಗೂ ದಾನಿಗಳ ನೆರವು ಪಡೆದು ಮಾದರಿ ಶಾಲೆ ನಿರ್ಮಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.ಅದಕ್ಕಾಗಿ ಅವರು ಅಭಿನಂದನಾರ್ಹರು. ಶಾಲೆ ಅಭಿವೃದ್ಧಿಗೆ ಪೂರಕವಾದ ಎಲ್ಲ ನೆರವು ನೀಡಲಾಗುವುದು. ಸಂಸ್ಥೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ರಂಗಭೂಮಿ ಕಲಾವಿದೆ ಡಾ. ವಿಜಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಡಾ. ರಮೇಶ್, ಡಾ. ಯಶಸ್ವಿನಿ ಶ್ರೀರಾಮರೆಡ್ಡಿ ಅವರ ಬದುಕು ಹಾಗೂ ಸೇವೆ ಕುರಿತು ಮಾತನಾಡಿದರು.
ಭೈರವೇಶ್ವರ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ಆದಿಮ ಸಂಸ್ಥೆಯ ಕೋಮಣ್ಣ, ಹ.ಮಾ.ರಾಮಚಂದ್ರ, ಕೃಷಿ ಸಂಸ್ಕøತಿ ಕೇಂದ್ರದ ಮುಖ್ಯಸ್ಥ ಬೈಚೇಗೌಡ, ಲೇಖಕ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಗಾಯಕ ಹುಂಜ ಮುನಿರೆಡ್ಡಿ, ರಾಮಾಂಜಮ್ಮ, ಬೈರಾರೆಡ್ಡಿ, ವೆಂಕಟರಾಮರೆಡ್ಡಿ, ಪ್ರೊ. ಸತೀಶ್ಚಂದ್ರಾರೆಡ್ಡಿ, ನರಸಿಂಹಯ್ಯ, ಶಿವಾರೆಡ್ಡಿ, ಪರಮೇಶ್ ಇದ್ದರು.