ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣ ಲಾಕ್ ಡೌನ್ ಪ್ರಯುಕ್ತ ಬುಧವಾರ ಬೆಳಿಗ್ಗೆ 10 ಗಂಟೆ ಬಳಿಕ ಸ್ತಬ್ಛವಾಗಿತ್ತು. ಪಟ್ಟಣದಲ್ಲಿ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು.
ಪ್ರಾರಂಭದಲ್ಲಿ ವಿನಾ ಕಾರಣ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಚಾಕರಿಗೆ ಪುರಸಭೆ ಸಿಬ್ಬಂದಿ ಹಾಗೂ ಪೊಲೀಸರು ಬಿಸಿ ಮುಟ್ಟಿಸಿದರು. ನಂತರ ರಸ್ತೆಗಳು ನಿರ್ಜನವಾದವು ಹಾಗೂ ಯಾವುದೇ ವಾಹನ ಸಂಚಾರ ಇರಲಿಲ್ಲ. ಕೆಲವರು ಪಟ್ಟಣದಿಂದ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದುದು ಕಂಡುಬಂತು.
ಬ್ಯಾಂಕ್ ಹಾಗೂ ಕಚೇರಿಗಳು ತೆರೆದಿದ್ದವಾದರೂ, ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೋವಿಡ್ಗೆ ಹೆದರಿದ ಗ್ರಾಮೀಣ ಪ್ರದೇಶದ ಜನರು ಪಟ್ಟಣದ ಕಡೆ ತಲೆ ಹಾಕಲು ಹಿಂಜರಿಯುತ್ತಿದ್ದಾರೆ.