ಶ್ರೀನಿವಾಸಪುರ: ಶಿಕ್ಷಕ ಸಮುದಾಯ ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು ಎಂದು ಯರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಹೇಳಿದರು.
ತಾಲ್ಲೂಕಿನ ಬೂರಮಾಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದವರು, ಮಕ್ಕಳಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಸೌಲಭ್ಯ ಹಾಘೂ ಅವಕಾಶಗಳ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹಿಂದುಳಿದಿದ್ದಾರೆ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂಬುದನ್ನು ಮರೆಯಲಾಗದು. ವಿದ್ಯಾರ್ಥಿಗಳು ಲಭ್ಯವಿರುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಹೇಳಿದರು.
ಇಸಿಒ ಹನುಮೇಗೌಡ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸು ಉದ್ದೇಶದಿಂದಲೇ ಪ್ರತಿಭಾ ಕಾರಂಜಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆಟೋಟಗಳು ಮಾತ್ರವಲ್ಲದೆ, ಹಲವು ಸಹಪಠ್ಯ ಚಟುವಟಿಕೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಗಾಗಲೇ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಹಲವು ಹಂತಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗಮಣಿ, ಸಿಆರ್‍ಪಿ ಜಯರಾಮರೆಡ್ಡಿ, ಮುಖ್ಯ ಶಿಕ್ಷಕ ವೆಂಕಟಶಿವಪ್ಪ, ಶಿಕ್ಷಕ ಲಕ್ಮೀನಾರಾಯಣ, ವರದರೆಡ್ಡಿ, ಹರೀಶ್ ಇದ್ದರು.