ರಚನೆ:- ಬಿ.ಆರ್.ರವೀಂದ್ರ ವಕೀಲರು ಮತ್ತು ಸಾಹಿತಿಗಳು ಕೋಲಾರ.
ಕೈವಾರ ತಾತಯ್ಯನವರು ತಮ್ಮ ನಾದ ಬ್ರಹ್ರ್ಮಾನಂದ -ನಾರೇಯಣ ಶತಕದಲ್ಲಿ ಈ ರೀತಿ ಹೇಳುತ್ತಾರೆ,
ಚಾಪಲ್ಯ ಮತಮುಲೋ – ಚೇರಿನ ವಾರೆಲ್ಲ
ಅವಿವೇಕುಲಯಿನಾರು – ಆತ್ಮ ಮರಚಿ
ಅಟುವಂಟಿ ದುರ್ಮತಮು -ಆದಿ ಎಂದು ಲೇದುರಾ
ನಾದ ಬ್ರಹ್ರ್ಮಾನಂದ -ನಾರೇಯಣ ಕವಿ
ಅಂದರೆ ಇಂದ್ರೀಯ ಸುಖ ಭೋಗವನ್ನು ಬಯಸುವವನು ಚಪಲಚಿತ್ತನಾಗಿ, ಅಜ್ಞಾನದ ಅಂಧಕಾರದಲ್ಲಿ ಮುಳುಗಿ, ತಮ್ಮ ಜನ್ಮದ ರಹಸ್ಯವನ್ನೇ ಮರೆಯುತ್ತಾನೆ, ತನ್ನೊಳಗೆ ಅಮಿತವಾದ ಜ್ಞಾನವಿದ್ದರೂ ಸಹ ಅರಿವಿಲ್ಲದೆ ಆತ ಅವಿವೇಕಿಯಾಗುತ್ತಾನೆ, ಯಾರು ಈ ಇಂದ್ರಿಯ ಸುಖ ಭೋಗವನ್ನು ಮರೆತು ಆತ್ಮ, ಪರಮಾತ್ಮನ ಬಗ್ಗೆ ಚಿಂತನೆ ಮಾಡದೆ ಸ್ತ್ರೀ ವ್ಯಾಮೋಹಕ್ಕೆ ಒಳಗಾಗುತ್ತಾನೋ ಅವನು ಶ್ರೇಷ್ಠವಾದ ಈ ಮಾನವ ಜನ್ಮವನ್ನು ವ್ಯರ್ಥವಾಗಿಸುತ್ತಾನೆ ಎಂದು ಹೇಳಿದ್ದಾರೆ.
ಹೀಗೆ ಸ್ತ್ರೀ ವ್ಯಾಮೋಹದ ಬಲೆಯಲ್ಲಿ ಸಿಲುಕಿದ್ದ ರಾಂಬೋಲಾ ದುಬೆ ತನ್ನ ಹೆಂಡತಿ ರತ್ನಾವಳಿ ಮಾಡಿದ ಹಿತೋಪದೇಶದಿಂದ ದೈಹಿಕ ಕಾಮನೆಯ ವ್ಯಾಮೋಹದಿಂದ ವಿಮುಖನಾಗಿ ಆತ್ಮಸಾಕ್ಷಾತ್ಕಾರ ಹೊಂದಲು ಶ್ರೀರಾಮನ ಪರಮ ಭಕ್ತನಾಗಿ ಶ್ರೇಷ್ಠ ಮಹಾ ಕಾವ್ಯ” ದಿ ನಾರ್ಥ ಇಂಡಿಯನ್ ಬೈಬಲ್” ಎಂಬ ಖ್ಯಾತಿಗೆ ಪಾತ್ರವಾದ “ರಾಮಚರಿತ ಮಾನಸ” ಎಂಬ ಮಹಾ ಕಾವ್ಯವನ್ನು ಹಾಗೂ ಪ್ರತಿ ದಿನ ಲಕ್ಷಾಂತರ ಮಂದಿ ಪಠಿಸುವ “ಹನುಮಾನ್ ಚಾಲೀಸಾ” ದಂತಹ ಶ್ರೇಷ್ಠ ಸಾಹಿತ್ಯವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿ ಕಲಿಯುಗದಲ್ಲಿ ಶ್ರೀರಾಮನ ಚರಿತೆಯನ್ನು ಸಾರಲು ವಾಲ್ಮೀಕಿಯೇ ಮತ್ತೆ ತುಳಸಿದಾಸನಾಗಿ ಅವತರಿಸಿದ್ದಾನೆ ಎಂದು ಖ್ಯಾತಿ ಪಡೆದದ್ದು ಒಂದು ಅದ್ಭುತ ಕಥೆ.
ಸ್ತ್ರೀ ವ್ಯಾಮೋಹಕ್ಕೆ ಬಲಿಯಾಗದವರೇ ಇಲ್ಲ, ಸ್ತ್ರೀ ಅಂಗಸುಖ ಬಯಸಿ ಸೌಂದರ್ಯಕ್ಕೆ ಮಾರುಹೋಗದವರು ಇಲ್ಲ, ಅಂತಹ ವಿಶ್ವಾಮಿತ್ರ ಮಹರ್ಷಿಯೇ ಒಂದು ಕ್ಷಣ ವಿಚಲಿತರಾಗುತ್ತಾರೆ, ಶಾಕುಂತಲೆಯ ಜನನಕ್ಕೆ ಕಾರಣರಾಗುತ್ತಾರೆ. ಹೀಗೆ ಸ್ತ್ರೀ ಮೋಹದಲ್ಲಿ ಬಿದ್ದವರಲ್ಲಿ ರಾಂಬೋಲಾ ದುಬೆ ಸಹ ಒಬ್ಬರು, ಅವರು ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ, ಆತನ ಮಡದಿಯ ತವರುಮನೆ ಸರಸೂ ನದಿಯ ಆಚೆಯ ದಡದಲ್ಲಿ ಇದ್ದರೆ ತುಳಸೀದಾಸನ ಮನೆ ಸರಯೂ ನದಿಯ ಈಚೆ ದಡದಲ್ಲಿ ಇರುತ್ತದೆ. ಒಂದು ದಿನ ತುಳಸೀದಾಸರು ಹನುಮಾನ್ ಮಂದಿರಕ್ಕೆ ಹೋಗಿದ್ದಾಗ ಆತನ ಹೆಂಡತಿ ತನ್ನ ಸಹೋದರನೊಂದಿಗೆ ತನ್ನ ತಂದೆಯ ಮನೆಗೆ ಹೋಗಿರುತ್ತಾಳೆ ಮನೆಗೆ ಬಂದು ನೋಡಿದ ತುಳಸೀದಾಸರು ತನ್ನ ಪತ್ನಿ ತವರು ಮನೆಗೆ ಹೋಗಿರುವುದು ಅರಿತು ಆ ಕತ್ತಲೆಯ ರಾತ್ರಿಯಲ್ಲಿಯೇ ಹೇಗಾದರೂ ತಾನು ತನ್ನ ಪತ್ನಿಯನ್ನು ಕಾಣಬೇಕು, ಆಕೆಯನ್ನು ಕೂಡಬೇಕು ಎಂದು ನಿರ್ಧರಿಸಿ ತುಂಬಿ ಹರಿಯುತ್ತಿರುವ ಸರಯೂ ನದಿಯನ್ನು ಲೆಕ್ಕಿಸದೆ ಈಜಿ ದಡ ಸೇರಿ ತನ್ನ ಹೆಂಡತಿಯನ್ನು ಕಾಣುತ್ತಾನೆ. ಆಗ ಆತನಲ್ಲಿ ಮಡುಗಟ್ಟಿದ ದೈಹಿಕ ಕಾಮನೆ, ವ್ಯಾಮೋಹ ಎಂತಹ ಮೂರ್ಖ ಕೆಲಸ ಮಾಡಿಸಿಬಿಟ್ಟಿದೆ, ಭಯಂಕರವಾಗಿ ಹರಿಯುತ್ತಿರುವ ನದಿಯನ್ನು ದಾಟಿಸಿದೆಯಲ್ಲಾ ಎಂದು ಬೇಸರಗೊಂಡ ಆತನ ಪತ್ನಿ ರತ್ನಾವಳಿ ತನ್ನ ಗಂಡನನ್ನು ನಿಂಧಿಸುತ್ತಾಳೆ, ಕೇವಲ ರಕ್ತ ಮಾಂಸದಿಂದ ತುಂಬಿರುವ ಈ ದೇಹದ ಮೇಲೆ ನಿಮಗೆ ಏಕೆ ಇಷ್ಟೊಂದು ವ್ಯಾಮೋಹ, ಈ ವ್ಯಾಮೋಹವನ್ನು ಬಿಟ್ಟು ಇದೇ ಆಸಕ್ತಿಯನ್ನು ದೇವರ ಮೇಲೆ ಭಕ್ತಿಯಾಗಿ ತೋರಿದ್ದರೆ ಜನ್ಮ ಸಾರ್ಥಕವಾಗುತ್ತಿತ್ತು ಎನ್ನುತ್ತಾಳೆ. ಆಗ ಹೆಂಡತಿಯ ಮಾತಿನಿಂದ ರಾಂಬೋಲಾ ದುಬೆಗೆ ಜ್ಞಾನೋದಯವಾಗುತ್ತದೆ. ಆಗಲೇ ಸಂಸಾರವನ್ನು ತೊರೆದ ಪ್ರಯಾಗಕ್ಕೆ ಹೊರಟು ಸನ್ಯಾಸ ದೀಕ್ಷೆಯನ್ನು ಪಡೆದು ತುಳಸಿದಾಸರಾಗುತ್ತಾರೆ. ಮುಂದೆ ಅವರ ರಾಮ ಭಕ್ತಿಗೆ ಪಾರವೇ ಇಲ್ಲದಂತಾಗುತ್ತದೆ.
ಹೀಗೆ ಜ್ಞಾನೋದಯವಾದ ತುಳಸಿದಾಸರು ರಾಮಚರಿತ ಮಾನಸ ಮುಂತಾದ ಹಲವಾರು ಕೃತಿಗಳನ್ನು, ಸಂಸ್ಕೃತ ಮತ್ತು ಸ್ಥಳೀಯ ಭಾಷೆಗಳಲ್ಲಿ ದೋಹಾಗಳನ್ನು ರಚಿಸುತ್ತಾರೆ. ಸತ್ತ ವ್ಯಕ್ತಿಯನ್ನು ಬದುಕಿಸಿ ಪವಾಡವನ್ನು ಮಾಡುತ್ತಾರೆ. ಅಕ್ಬರ್ ರಾಜನವರೆಗೆ ಆತನ ಪವಾಡಗಳು ತಲುಪುತ್ತವೆ. ಅಕ್ಬರ್ ತನ್ನ ಎದುರು ಪವಾಡಗಳನ್ನು ಮಾಡು ಎಂದು ಕೇಳಿದಾಗ ತುಳಸಿದಾಸರು ನಿರಾಕರಿಸುತ್ತಾನೆ. ಆಗ ಕೋಪಗೊಂಡ ಅಕ್ಬರ್ ಆತನನ್ನು ಬಂಧಿಸಿ ಕಾರಾಗೃಹದಲ್ಲಿ ಇಡುತ್ತಾನೆ. ಆಗ ತುಳಸಿದಾಸರು ನಲವತ್ತು ದಿನಗಳ ಕಾಲ ಹನುಮಾನ್ ಚಾಲಿಸ ಪಠಣೆ ಮಾಡಿದಾಗ, ಅಕ್ಬರ್ ನ ಅರಮನೆ ಮತ್ತು ನಗರಕ್ಕೆ ಕೋತಿಗಳು ದಾಳಿ ಮಾಡಿ ವಿಧ್ವಂಸ ಸೃಷ್ಟಿ ಮಾಡಲು ಪ್ರಾರಂಭಿಸುತ್ತವೆ. ಆಗ ಅಕ್ಬರ್ ತುಳಸೀದಾಸರ ರಾಮ ಭಕ್ತಿಗೆ ಮಾರುಹೋಗಿ ಆತನನ್ನು ಬಿಡುಗಡೆ ಮಾಡುತ್ತಾರೆ. ಇಂತಹ ರಾಮನ ಪರಮ ಭಕ್ತನಾದ ತುಳಸೀದಾಸರ ಸಾಹಿತ್ಯದ ಶ್ರೇಷ್ಠತೆಯನ್ನು ಪರೀಕ್ಷಿಸಲು ಕಾಶಿಯ ಬ್ರಾಹ್ಮಣರು ಒಂದು ದಿನ ಕಾಶಿ ವಿಶ್ವನಾಥನ ದೇವಾಲಯದಲ್ಲಿ ಕೆಲವು ಸಂಸ್ಕೃತ ಗ್ರಂಥಗಳ ಕೆಳಭಾಗದಲ್ಲಿ ತುಳಸಿ ದಾಸರ ರಾಮಚರಿತ ಮಾನಸ ಹಸ್ತಪ್ರತಿಯನ್ನು ಇಟ್ಟು ದೇವಸ್ಥಾನದ ಗರ್ಭಗುಡಿಗೆ ಬೀಗ ಹಾಕುತ್ತಾರೆ. ಆದರೆ ಬೆಳಿಗ್ಗೆ ಎದ್ದು ನೋಡಿದಾಗ ರಾಮಚರಿತ ಮಾನಸ ಕೃತಿ ಎಲ್ಲಾ ಹಸ್ತಪ್ರತಿಗಳ ಮೇಲೆ ಇದ್ದು ಅದರ ಮೇಲೆ “ಸತ್ಯಂ ಶಿವಂ ಸುಂದರಂ” ಎಂದು ದೇವರಿಂದ ಬರೆಯಲಾಗಿರುತ್ತದೆ. ಇದನ್ನು ಸಹಿಸದ ಕೆಲವರು ಆ ಮಹಾ ಕಾವ್ಯವನ್ನು ಕದಿಯಲು ರಾತ್ರಿ ಸಮಯದಲ್ಲಿ ಕಳ್ಳರನ್ನು ಕಳಿಸುತ್ತಾರೆ, ಆದರೆ ಕಳ್ಳರು ಆಶ್ರಮದ ಬಳಿ ಹೋದಾಗ ರಾಮ ಲಕ್ಷ್ಮಣರು ಮಾರುವೇಷದಲ್ಲಿ ಆತನ ಆಶ್ರಮಕ್ಕೆ ಕಾವಲು ಕಾಯುತ್ತಿರುವುದು ಕಂಡು ಭಯಪಟ್ಟು ಓಡಿ ಹೋಗುತ್ತಾರೆ. ಹೀಗೆ ಒಬ್ಬ ಪವಾಡ ಪುರುಷನಾಗಿ ಒಬ್ಬ ಶ್ರೇಷ್ಠ ಕವಿಯಾಗಿ ಹಲವು ಕೃತಿಗಳನ್ನು, ಲಕ್ಷಾಂತರ ಮಂದಿ ಹಿಂದುಗಳು ಪಠಣ ಮಾಡುವ ಹನುಮಾನ್ ಚಾಲೀಸ್ ನಂತಹ ಭಕ್ತಿ ಸಾಹಿತ್ಯದಲ್ಲಿಯೇ ಶ್ರೇಷ್ಠ ದ್ವಿಪದಿ ಶ್ಲೋಕಗಳನ್ನು ರಚನೆ ಮಾಡಿ ಶ್ರೇಷ್ಠ ಋಷಿ, ಸಂತ ಶಿರೋಮಣಿ ಎಂಬ ಬಿರುದು ಪಡೆಯುತ್ತಾನೆ. ಇವೆಲ್ಲವೂ ಸಾಧ್ಯವಾಗಿದ್ದು ಆತ ದೈಹಿಕ ಕಾಮನೆ ಬಿಟ್ಟು ದೈವ ಭಕ್ತಿಯ ಮಾರ್ಗ ಅನುಸರಿಸಿದ್ದು ಮುಖ್ಯ ಕಾರಣವಾದರೆ. ಆ ರೀತಿ ಭಕ್ತಿ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಿದ್ದು ಮಾತ್ರ ಆತನ ಮಡದಿ.
ಹಾಗೆಂದು ಎಲ್ಲರೂ ಹೆಂಡತಿ ಮಕ್ಕಳನ್ನು ಬಿಡಬೇಕು ಎಂದೂ ಇಲ್ಲ, ರಾಮದಾಸರಂತೆ ಸಂಸಾರಸ್ಥರಾಗಿಯೂ ರಾಮನ ಪ್ರೀತಿಗೆ ಪಾತ್ರರಾದವರು ಹಲವಾರು ಇದ್ದಾರೆ. ಆದರೆ ಅತಿಯಾದ ವ್ಯಾಮೋಹವನ್ನು ಬಿಡಬೇಕು ಅಷ್ಟೆ. ಆ ವ್ಯಾಮೋಹವನ್ನು ಬಿಡಿಸುವ ಶಕ್ತಿ ಮತ್ತು ವ್ಯಕ್ತಿ ಒಬ್ಬ ಹೆಣ್ಣಾಗಿದ್ದು ವಿಶೇಷ. ಯಾವ ರೀತಿ ತೆಲುಗಿನ ಸಾಹಿತಿ ವೇಮನನಿಗೆ ಆತನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ
ಜ್ಞಾನೋದಯ ಮಾಡಿ ವಿಶ್ವಕ್ಕೆ “ವೇಮನ ಶತಕ” ದಂತಹ ಶ್ರೇಷ್ಠ ಸಾಹಿತ್ಯವನ್ನು ಕೊಡುಗೆಯಾಗಿ ನೀಡಲು ಅವಕಾಶ ಮಾಡಿದಳೋ ಹಾಗೆ ಮರಿಯಾದ ಪುರುಷೋತ್ತಮ ಶ್ರೀರಾಮಚಂದ್ರನ ಕುರಿತು “ರಾಮಚಂದ್ರ ಮಾನಸ ದಂತಹ” ಮಹಾ ಕಾವ್ಯವನ್ನು, ಹನುಮಂತನನ್ನು ಸ್ತುತಿಸುವ “ಹನುಮಾನ್ ಚಾಲಿಸ” ದಂತಹ ಶ್ಲೋಕಗಳನ್ನು ಬರೆದು ವಿಶ್ವಕ್ಕೆ ಕೊಡುಗೆಯಾಗಿ ನೀಡಲು ಪ್ರೇರಣೆ ನೀಡಿದ ಆ ಘಟನೆ ಹಾಗೂ ಕೇವಲ ಒಬ್ಬ ವ್ಯಕ್ತಿ ತನಗಾಗಿ, ತನ್ನ ಕುಟುಂಬಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಬೇಕು ಎಂದು ಒಬ್ಬ ಹೆಣ್ಣಾಗಿ ರತ್ನಾವಳಿ ತನ್ನ ಗಂಡನಿಗೆ ನೀಡಿದ ಹಿತೋಪದೇಶ ನಿಜಕ್ಕೂ ಆದರ್ಶ ಸ್ತ್ರೀ ತತ್ವವನ್ನು ಸಾರುತ್ತದೆ. ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳುತ್ತಾರೆ ಆದರೆ ಸ್ತ್ರೀಯನ್ನು ಕೇವಲ ಭೋಗದ ವಸ್ತುವಾಗಿ ಕಾಣದೆ ಒಬ್ಬ ಗುರುವಾಗಿ, ಗೆಳೆಯನಾಗಿ, ಹಿತೈಷಿಯಾಗಿ ಕಂಡಾಗ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ. ಹಾಗಾದಾಗ ಮಾತ್ರ ತುಳಸಿದಾಸರಂತೆ ಸಾಧಕರು ಸಮಾಜದಲ್ಲಿ ಕಾಣಲು ಸಾಧ್ಯ.