ಜನನುಡಿ ಕಥಾ ವಿಭಾಗ
‘ನನ್ನ ಬರಹದ ಕಥೆ-ವ್ಯಥೆ’ ಲೇಖಕಿ: ಕೆರೊಲ್ ಗೊನ್ಸಾಲ್ವಿಸ್
ಎಲ್ಲರಿಗೂ ಒಂದಿಲ್ಲೊಂದು ಹವ್ಯಾಸ ಇದ್ದೇ ಇರುತ್ತದೆ, ಇದಕ್ಕೆ ನಾನೂ ಹೊರತಲ್ಲ. ಓದುವುದು ನನ್ನ ನೆಚ್ಚಿನ ಹವ್ಯಾಸ; ಅದು ಕಥೆ, ಕವನ, ವಾರ್ತೆ, ಲೇಖನ, ಹೀಗೆ ಏನೇ ಆಗಿರಬಹುದು ಒಟ್ಟಿನಲ್ಲಿ, ಓದಲಿಕ್ಕಿದ್ದರೆ ಸಾಕು.ಯಾವತ್ತೂ ಬೇರೆಯವರು ಬರೆದಿದ್ದನ್ನು ಓದುತ್ತಿದ್ದ ನನಗೆ ಒಂದು ದಿನ, ನಾನೂ ಯಾಕೆ ಬರೆಯಲು ಪ್ರಯತ್ನಿಸಬಾರದು ಎಂಬ ಆಲೋಚನೆ ಬಂತು. ಆಲೋಚನೆ ಬಂದಿದ್ದೇ ತಡ, ಇನ್ನು ಕಾರ್ಯರೂಪಕ್ಕೆ ತರುವುದೇ ಎಂದು ಬರೆಯಲು ಕುಳಿತರೆ, ‘ಏನು ಬರೆಯುವುದು’ ಎಂಬ ಚಿಂತೆ ಶುರುವಾಯಿತು. ದಿನಪತ್ರಿಕೆಗಳಲ್ಲಿ ಬರುವ ವರದಿಯ ಬಗ್ಗೆ ಅಭಿಪ್ರಾಯ ಬರೆಯುವುದೋ ಅಥವಾ ಕಥೆ, ಕವನ ಬರೆಯುವುದೋ ಎಂದು ಯೋಚನೆ ಮಾಡಿ ಮಾಡಿ ಕೊನೆಗೂ ಏನೋ ಒಂದು ಬರೆದೆ. ಇನ್ನೇನು ಅದನ್ನು ಪತ್ರಿಕೆಗೆ ಕಳುಹಿಸುವುದೊಂದೇ ಬಾಕಿ, ಆವಾಗಲೇ ಹೊಸ ಸಮಸ್ಯೆ ತಲೆದೋರಿತು!
ನನ್ನ ಬರಹ ಪ್ರಕಟಗೊಳ್ಳುವಾಗ, ಯಾವ ಹೆಸರಿನಲ್ಲಿ ಪ್ರಕಟವಾಗಬೇಕು ಎನ್ನುವುದೇ ಆ ಸಮಸ್ಯೆ. ಸ್ವಲ್ಪ ಹೊತ್ತು ಯೋಚಿಸಿ, ‘ಕೆರೊಲ್ ತಲ್ಲೂರು’ ಎಂದು ನನ್ನ ಹೆಸರಿನ ಜೊತೆ ನನ್ನ ಊರ ಹೆಸರನ್ನೂ ಸೇರಿಸಿದರೆ ಚೆನ್ನಾಗಿರುತ್ತೆ ಅಂತ ಅಂದುಕೊಂಡ ಮರುಕ್ಷಣವೇ ನನಗೆ ಇತ್ತೀಚಿನ ವಿದ್ಯಮಾನಗಳು ನೆನಪಿಗೆ ಬಂದವು. ತಮ್ಮ ಹೆಸರಿನ ಮುಂದೆ ಊರಿನ ಹೆಸರನ್ನು ಹಾಕಿ ತಮ್ಮ ಮಾತಿನಿಂದ ಭಯಂಕರ ಪ್ರಸಿದ್ಧಿ ಪಡೆದ ವ್ಯಕ್ತಿಯೊಬ್ಬರ ಅವ್ಯವಹಾರ ಇತ್ತೀಚೆಗೆ ಬಯಲಾದಾಗ, ಅವರ ಹೆಸರಿನೊಂದಿಗಿರುವ ಊರಿನ ಹೆಸರನ್ನು ಸುದ್ದಿ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬಳಸಬಾರದೆಂದು ಆ ಊರಿನವರು ಆಕ್ರೋಶಗೊಂಡು ವಿರೋಧಿಸಿದ್ದನ್ನು ನೆನೆಪಿಗೆ ಬಂದು ನಾನು, ‘ಇನ್ನು ನನ್ನ ಬರಹ ಪ್ರಕಟವಾದಾಗ,ನನ್ನ ಗ್ರಹಚಾರಕ್ಕೆ ಅದರಲ್ಲಿರುವ ಯಾವುದೋ ವಿಷಯವು ಅಪ್ಪಿತಪ್ಪಿ ಯಾರಿಗೋ, ಎಲ್ಲೋ, ಯಾವ ಸಂದರ್ಭದಲ್ಲೋ ನೋವು ತಂದಿದೆ ಎಂದು ವಿರೋಧ ವ್ಯಕ್ತವಾದರೆ, ಊರಿನ ಹೆಸರನ್ನು ಹಾಳು ಮಾಡಿದೆನೆಂದು ನನ್ನ ಊರವರೆಲ್ಲ ಸೇರಿ ಗ್ರಹಚಾರ ಬಿಡಿಸುತ್ತಾರೆ ಅಷ್ಟೇ ‘ ಎಂದು ಈ ಆಲೋಚನೆ ಕೈ ಬಿಟ್ಟೆ.
ಕವಿಗಳು ಇಟ್ಟುಕೊಳ್ಳುವಂತೆ ಕಾವ್ಯನಾಮವನ್ನು ಇಟ್ಟರೆ ಹೇಗೆ ಎಂಬ ಆಲೋಚನೆ ಬಂದಿದ್ದೇ, ‘ಕು.ವೆಂ.ಪು’ ನೆನಪಾಗಿ ಅವರಂತೆಯೇ, ‘ತ.ಕೆ.ಗೊ’ (ತಲ್ಲೂರು ಕೆರೊಲ್ ಗೊನ್ಸಾಲ್ವಿಸ್) ಎಂದು ಹ್ರಸ್ವ ರೂಪಕ್ಕೆ ತಂದಾಗ ಯಾಕೋ ಹಿಡಿಸಲಿಲ್ಲ. ದ.ರಾ.ಬೇಂದ್ರೆಯವರ ಕಾವ್ಯನಾಮ ‘ಅಂಬಿಕಾತನಯದತ್ತ’ದಂತೆ, ‘ಕ್ಲಿಫರ್ಡತನುಜೆಕೆರೊಲ್’ – ಇದು ಸ್ವಲ್ಪ ಕಷ್ಟವಾಗಬಹುದೆಂದು, ‘ಕಿಲ್ಪಿತನುಜೆಕೆಲ್ಲ’ ಅಂತ ಮಾಡಿದಾಗ ಅದೂ ಸರಿಕಾಣದಿದ್ದ ನಂತರ ಈ ಆಲೋಚನೆಯನ್ನೂ ಕೈಬಿಟ್ಟೆ.
‘ಮೂಗಿಗಿಂತ ಮೂಗುತಿ ಭಾರ’ ಅನ್ನೋ ಗಾದೆಯಂತೆ, ನನ್ನ ಬರಹದ ವಿಷಯಕ್ಕಿಂತ, ಹೆಸರಿಡುವ ಗೋಳೇ ದೊಡ್ಡದಾದಾಗ, ಸದ್ಯಕ್ಕೆ ‘ಕೆರೊಲ್ ಗೊನ್ಸಾಲ್ವಿಸ್ ‘ ಎಂದೇ ಇಟ್ಟು, ಮುಂದೆ ಯಾವಾಗಲಾದರೂ ಶಾಂತಚಿತ್ತದಿಂದ ಯೋಚಿಸಿದರಾಯಿತೆಂದು ನನ್ನ ಬರಹ ಕಳುಹಿಸಿ ನಿರಾಳಳಾದೆ.