ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ : ಇಲ್ಲಿಗೆ ಸಮೀಪದ ಕೋಟೇಶ್ವರದ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಹೊರ ಜಗುಲಿಯನ್ನೇ ಮನೆ ಮಾಡಿಕೊಂಡು ಸುಮಾರು 30 ವರ್ಷಗಳಿಂದಲೂ ವಾಸಿಸುತ್ತಾ, ಭಿಕ್ಷಾಟನೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಭಿಕ್ಷುಕನೊಬ್ಬನನ್ನು ಸೋಮವಾರ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ತೀವ್ರ ಅನಾರೋಗ್ಯದಿಂದಾಗಿ ದೇವಾಲಯ ಆಡಳಿತ ಸಮಿತಿಯವರ ವಿನಂತಿಯ ಮೇರೆಗೆ ಕೋಟದ ಆಪತ್ಬಂಧು ಜೀವನ್ಮಿತ್ರ ನಾಗರಾಜ ಅವರು ಈ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು.
ಭಿಕ್ಷುಕನ ಹಿನ್ನೆಲೆ
ಭಿಕ್ಷುಕ ಸುಮಾರು 57 ವರ್ಷ ಪ್ರಾಯದವನಾಗಿದ್ದು, ತನ್ನ ಹೆಸರು ರಾಮ ಎಂದಷ್ಟೇ ಹೇಳುತ್ತಾನೆ. ಊರು, ಮನೆ ಬಗ್ಗೆ ವಿಚಾರಿಸಿದರೆ, ಕೋಟಿಲಿಂಗೇಶ್ವರ ದೇವಾಲಯವೇ ತನ್ನ ಮನೆ ಎನ್ನುತ್ತಾನೆ. ಆದರೆ, ದೇವಾಲಯ ವಠಾರದಲ್ಲಿ ಇಷ್ಟೊಂದು ಸುದೀರ್ಘ ಅವಧಿ ವಾಸಿಸಲು ಪೊಲೀಸರು ಅವಕಾಶ ಕೊಡುವುದಿಲ್ಲ. ಮಾತ್ರವಲ್ಲ, ಈ ರಾಮ ಇಲ್ಲಿಗೆ ಬಂದು ನಾಲ್ಕೈದು ವರ್ಷಗಳಾಗಿರಬಹುದಷ್ಟೇ ಎಂದು ಸ್ಥಳೀಯರು ಹೇಳುತ್ತಾರೆ.
ಶ್ರೀಮಂತ ಭಿಕ್ಷುಕ ಬ್ಯಾಂಕಿನಲ್ಲಿ 8 ಲಕ್ಷದ 66 ಸಾವಿರ ರೂ. ನಿರಖು ಠೇವಣಿ
ರಾಮ ಎಲ್ಲರೂ ತಿಳಿದಂತೆ ಬಡ ಭಿಕ್ಷುಕನಲ್ಲ! ಇವನನ್ನು ಆಸ್ಪತ್ರೆಗೆ ಸಾಗಿಸುವಾಗ ಇವನ ಹಡಪದಲ್ಲಿ 11, 300 ರೂ. ನಗದು ಸಿಕ್ಕಿದೆ! ಮತ್ತೆ ವಿಚಾರಣೆಯಿಂದ, ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 8 ಲಕ್ಷದ 66 ಸಾವಿರ ರೂ. ನಿರಖು ಠೇವಣಿ ಇರುವುದಾಗಿಯೂ ತಿಳಿದುಬಂದಿದೆ!! ಪ್ರತಿದಿನವೂ ರಾಮ ಚಿಕನ್, ಮಟನ್ ಬಿರಿಯಾನಿ ಇತ್ಯಾದಿ ಪುಷ್ಕಳ ಭೋಜನವನ್ನೇ ಮಾಡುತ್ತಿದ್ದ. ಭಿಕ್ಷುಕನಾದರೂ ಒಳ್ಳೆಯ ಲೈಫ್ ಸ್ಟೈಲ್ ಹೊಂದಿದ್ದ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು, ಕೋಟೇಶ್ವರದ ಜನರು ಇವನಿಗೆ ಕೈತುಂಬಾ ಭಿಕ್ಷೆ, ಆಹಾರ, ವಸ್ತ್ರ ನೀಡುತ್ತಿದ್ದರು.
ಮಹಾ ನಗರ ಸಂಚಾರ
ರಾಮ ತನ್ನೂರು ಯಾವುದೆಂದು ಹೇಳದಿದ್ದರೂ ತನಗೆ ಮದುವೆಯಾಗಿರುವುದಾಗಿ ತಿಳಿಸುತ್ತಾನೆ. ಯಾವುದೋ ಕಾರಣದಿಂದ ಪತ್ನಿ ಇವನನ್ನು ತೊರೆದಳು. ಮಕ್ಕಳಿಲ್ಲವಂತೆ. ಬಹುಶಃ ಮನೆಯವರೂ ಹೊರಹಾಕಿದರು. ನಂತರ ಈತನ ಭಿಕ್ಷಾ ಪರ್ಯಟನೆ ಪ್ರಾರಂಭವಾಯಿತು. ಮುಂಬೈ, ಹೈದರಾಬಾದ್ ನಂತಹ ಮಹಾ ನಗರಗಳು, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ ಮೊದಲಾದ ನಗರಗಳಲ್ಲೆಲ್ಲಾ ತಾನು ಭಿಕ್ಷಾಟನೆ ಮಾಡಿರುವುದಾಗಿ ತಿಳಿಸುತ್ತಾನೆ. ಅಂತಿಮವಾಗಿ ಕೋಟೇಶ್ವರಕ್ಕೆ ಬಂದು ದೇವಾಲಯ ಜಗುಲಿಯನ್ನು ಖಾಯಂ ನಿವಾಸವಾಗಿ ಮಾಡಿಕೊಂಡ. ಹೆಜ್ಜೆಗಳ ಅಂತರದಲ್ಲೇ ಹಲವು ಕಲ್ಯಾಣ ಮಂಟಪಗಳಿರುವ ಕೋಟೇಶ್ವರದಲ್ಲಿ ಸುಗ್ರಾಸ ಭೋಜನಕ್ಕೆಂದೂ ಕೊರತೆಯಿಲ್ಲ. ಈ ಊರಿನ ಜನರ ಧಾರಾಳತನವೂ ಇದಕ್ಕೆ ಕಾರಣವಾಗಿರಬಹುದು.
ಕೈ ಕೊಟ್ಟ ಆರೋಗ್ಯ : ಹೀಗಿರುವಲ್ಲಿ ರಾಮನಿಗೆ ಮಧುಮೇಹ, ಬಿ. ಪಿ. ಇತ್ಯಾದಿಗಳು ಆಟಕಾಯಿಸಿಕೊಂಡವು. ಪರಿಣಾಮವಾಗಿ ಕಣ್ ದೃಷ್ಟಿ ಮಂದವಾಗಿ, ಕಾಲುಗಳಲ್ಲೂ ಗಾಯವಾಯಿತು. ನಡೆಯಲಾರದ ಪರಿಸ್ಥಿತಿ ಬಂದಿತು. ದೇವಸ್ಥಾನ ಸಮಿತಿಯವರು ಈತನ ರಕ್ಷಣೆ ಬಗ್ಗೆ ಮುಂದಾದರು. ವಿಚಾರಿಸಿದರೆ, ಇವನ ಕುಟುಂಬದವರು ಯಾರೂ ಪತ್ತೆಯಾಗಲಿಲ್ಲ.
ಆಪತ್ಬಂಧುವಾದ ನಾಗರಾಜನ ಸೇವೆ
ಈ ಸಂದಿಗ್ಧ ಸ್ಥಿತಿಯಲ್ಲಿ ಸಮಿತಿಯವರ ನೆರವಿಗೆ ಬಂದದ್ದೇ ಕೋಟದ ಜೀವನ್ಮಿತ್ರ ನಾಗರಾಜ. ಅನಾಥರು, ದುರ್ಬಲರು, ಮೂಕ ಜೀವಿಗಳ ಪಾಲಿನ ಪರಮಾಪ್ತ ಈ ನಾಗರಾಜ. ವಿಷಯ ತಿಳಿಯುತ್ತಲೇ ಧಾವಿಸಿ ಬಂದ ನಾಗರಾಜ, ರಾಮನಿಗೆ ಕ್ಷೌರ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಹೊಸ ಕಳೆಯೇರುವಂತೆ ಮಾಡಿದರು. ತನ್ನದೇ ವಾಹನದಲ್ಲಿ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಇಲ್ಲಿಯೇ ಸಾಕಷ್ಟು ಮಂದಿ ಇಂತಹವರಿರುವಾಗ ದೂರದ ಊರಿಂದ ಯಾಕೆ ಅನಾಥರನ್ನು ಕರೆದುಕೊಂಡು ಬರುವಿರಿ ಎಂಬ ಅಲ್ಲಿನ ಡಾಕ್ಟರರ ಸಿಡಿಮಿಡಿಯನ್ನು ಅರಗಿಸಿಕೊಂಡು ನಾಗರಾಜರು ತಾಳ್ಮೆಯಿಂದ ರಾಮನ ಸೇವೆಗೆ ನಿಂತರು. ಪರ ದ್ರವ್ಯವನ್ನು ಮಣ್ಣಿನ ಹೆಂಟೆಯಂತೆ ಪರಿಗಣಿಸುವ ಜೀವನ್ಮಿತ್ರ ನಾಗರಾಜ ರಾಮನ ಹಡಪದಲ್ಲಿ ಸಿಕ್ಕಿದ 11, 300 ರೂ. ನಗದನ್ನು ಸೀದಾ ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಹೋದರು. ಪ್ರಾಮಾಣಿಕ ಅಧಿಕಾರಿ ಎಂದೇ ಜನಮನ್ನಣೆ ಗಳಿಸಿದ ಇಲ್ಲಿನ ಸಬ್ ಇನ್ಸ್ಪೆಕ್ಟರ್ ಸದಾಶಿವ ಗವರೋಜಿಯವರು, ನಾಗರಾಜನಿಗೆ ತಿಳಿಹೇಳಿ, ಈ ರೀತಿ ಹಣವನ್ನು ಠಾಣೆಯಲ್ಲಿರಿಸಿಕೊಳ್ಳಲಾಗದು. ರಾಮನ ಶುಶ್ರೂಷೆಗೆ, ಮುಂದೆ ಅವನ ಕಣ್ಣು ಆಪರೇಷನ್ ಮತ್ತು ಕನ್ನಡಕಗಳಿಗೆ, ಆಹಾರ, ಬಟ್ಟೆಗಳಿಗೆ ಆ ಹಣವನ್ನು ಬಳಸಿ ಎಂದು ಸಲಹೆ ನೀಡಿದರು. ಅಂತೂ 30 ವರ್ಷಗಳಿಂದ ದೇವಾಲಯವನ್ನೇ ಮನೆ ಮಾಡಿಕೊಂಡಿದ್ದ ರಾಮನ ಜೀವನದ ಸಂಧ್ಯಾ ಕಾಲದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಈ ಹೊಸ ಅಧ್ಯಾಯದ ಮುನ್ನುಡಿ ಬರೆವಲ್ಲಿ ಮುಖ್ಯವಾಗಿ ಜೀವನ್ಮಿತ್ರ ನಾಗರಾಜ, ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸದಸ್ಯ ಸುರೇಶ್ ಬೆಟ್ಟಿನ್ ಇತರರು ಪ್ರಮುಖ ಪಾತ್ರ ವಹಿಸಿದ್ದಾರೆ.
ಫೋಟೋ : ಭಿಕ್ಷುಕ ರಾಮ