

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅಂದು ಎಲ್ಲ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ ಸಲುವಾಗಿ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಬಗ್ಗೆ ಕಾರ್ಮಿಕ ಆಯುಕ್ತರು ಆದೇಶವನ್ನು ಹೊರಡಿಸಿದ್ದು, ಏಪ್ರಿಲ್ 26ರ ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಹಾಗೂ ಮೇ 07ರ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರು ಸಹ ಮತದಾನ ಮಾಡಬೇಕಿದೆ. ಹಾಗಾಗಿ ಅಂದು ಕಾರ್ಮಿಕರಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸದರಿ ದಿನಾಂಕದಂದು ಮತದಾನ ನಡೆಯಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಪ್ರಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ, ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಅರ್ಹರಿರುವ ಎಲ್ಲ ಕಾರ್ಮಿಕ ಮತದಾರರಿಗೆ ಏಪ್ರಿಲ್ 26ರಂದು ವೇತನ ಸಹಿತ ರಜೆ ನೀಡಿ, ಎಲ್ಲ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡಲು ಸೂಚಿಸಲಾಗಿದೆ.