ಶ್ರೀನಿವಾಸಪುರ: ತಾಲ್ಲೂಕು ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಬಾರದು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೆ ಬೆಳೆ ವಿಮೆ ಕೊಡಿಸಬೇಕು. ಹಾಲಿಗೆ ಕನಿಷ್ಟ ರೂ.50 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕಷ ವೀರಭದ್ರಸ್ವಾಮಿ ಮಾತನಾಡಿ, ಭೂ ಮಾಪನ ಇಲಾಖೆಯಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಿಸ್ಸಾ ಪೋಡಿ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತಾಲ್ಲೂಕು ಕಚೇರಿಯಲ್ಲಿ ರೈತರ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.