ನಾಗರಿಕರು ಕೊರೊನಾ ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕು ಹರಡುವಿಕೆ ತಡೆಯಬೇಕು ಗ್ರಾ. ಪಂ. ಅ. ಅಧಿಕಾರಿ ವಿದ್ಯಾರಾಣಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ನಾಗರಿಕರು ಕೊರೊನಾ ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ, ಸೋಂಕು ಹರಡುವುದನ್ನು ತಡೆಯಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾರಾಣಿ ಹೇಳಿದರು.
ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಕೊರೊನಾ ಕಾರ್ಯಪಡೆ ವತಿಯಿಂದ ಏರ್ಪಡಿಸಿದ್ದ ಕೊರೊನಾ ಜಾಗೃತಿ ಸಭೆಯಲ್ಲಿ ಮಾತನಾಡಿ, ಕೊರೊನಾಗೆ ಹೆದರಬೇಕಾಗಿಲ್ಲ. ಮುಂಜಾಗ್ರತೆ ವಹಿಸಬೇಕು. ರೋಗ ಹರಡದಂತೆ ತಡೆಯಬೇಕು ಎಂದು ಹೇಳಿದರು.
ಕೋವಿಡ್ ಲಕ್ಷಣ ಕಂಡು ಬಂದ ಕೂಡಲೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಮಾತನಾಡಿ, ಕೊರೊನಾ ಸೋಂಕಿತರು ವಿಷಯವನ್ನು ಗುಟ್ಟಾಗಿ ಇಡಬಾರದು. ಹಾಗೆ ಮಾಡುವುದರಿಂದ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಸೋಂಕು ನಿವಾರಣೆಯಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ಪರಿಸ್ಥಿತಿ ಬಿಗಡಾಯಿಸುವ ಸಂಭವ ಇರುತ್ತದೆ ಎಂದು ಹೇಳಿದರು.
ನಾಗರಿಕರು ವೈಯಕ್ತಿಕ ಹಾಗೂ ಗ್ರಾಮ ಸ್ವಚ್ಛತೆ ಪಾಲಿಸಬೇಕು. ತಪ್ಪದೆ ಮಾಸ್ಕ್ ಧರಿಸಿ, ಅಂತರ ಪಾಲಿಸಬೇಕು. ನಿಯಮಿತವಾಗಿ ಸಾಬೂನಿನಿಂದ ಕೈ ತೊಳೆಯುವುದನ್ನು ಮರೆಯಬಾರದು ಎಂದು ಹೇಳಿದರು.
ಟಾಸ್ಕ್ ಫೋರ್ಸ್ ಸದಸ್ಯರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಕೊರೊನಾ ತಡೆ ಕುರಿತು ಜಾಗೃತಿ ಮೂಡಿಸಿದರು. ಕೊರೊನಾ ನಿಯಮ ಪಾಲಿಸುಂತೆ ಮನವಿ ಮಾಡಿದರು.
ಉಪ ತಹಶೀಲ್ದಾರ್ ಚಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಭೀಮರಾವ್, ವೆಂಕಟರಾಮಪ್ಪ, ನವೀನ್ ಸಂಪತ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು
.