ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಪ್ರತಿ ದಿನ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ . ಕೋವಿಡ್ ವಾರಿಯರ್ ಗುಂಪಿಗೆ ಸೇರಿದ ಇವರು ಜೀವದ ಮೇಲಿನ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ` ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು . ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪತ್ರಿಕಾ ವಿತರಕರಿಗೆ ಶನಿವಾರ ಆಹಾರ ಪದಾರ್ಥದ ಕಿಟ್ ವಿತರಿಸಿ ಮಾತನಾಡಿ , ದರ್ಮಸ್ಥಳದ ಧರ್ಮಾಧಿಕಾರಿ ಡಾ . ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜ ಸೇವಾ ಕಾರ್ಯ ಕೈಗೊಂಡು , ಬಡವರ ಹಸಿವು ನೀಗುವ ಕಾರ್ಯದಲ್ಲಿ ತೊಡಗಿದ್ದಾರೆ . ಅವರು ಕೈಗೊಂಡಿರುವ ಯೋಜನೆಗಳ ಫಲವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಹೇಳಿದರು . ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ಯೋಜನಾಧಿಕಾರಿ ಎಸ್.ಸುರೇಶ್ ಗೌಡ ಮಾತನಾಡಿ , ಈಗಾಗಲೆ ಕೋವಿ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ವಾಹನದ ವ್ಯವಸ್ಥೆ , ಆಸ್ಪತ್ರೆಗಳಿಗೆ ಆಮ್ಲಜನಕ , ವೆಂಟಿಲೇಟರ್ , ಮತ್ತು ಕನ್ಸನ್ಟೈಟಲ್ ಸೌಲಭ್ಯ ಕಲ್ಪಿಸಲಾಗುತ್ತಿದೆ . ಈಗ ಲಾಕ್ ಡೌನ್ನಿಂದ ತೊಂದರೆಗೆ ಒಳಗಾಗಿರುವ ಜನರಿಗೆ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತಿದೆ ಎಂದು ಹೇಳಿದರು . ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್ ಇದ್ದರು . ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ , ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಇದ್ದರು .