


“ಸಾಧಿಸಬೇಕು ಎಂಬ ಛಲ ಹೊಂದಿದವರಿಗೆ ತಮ್ಮ ಸಾಧನೆಯ ಹಾದಿ, ಗುರಿ ಹಾಗೂ ದೃಢ ಸಂಕಲ್ಪವಿದ್ದರೆ ಸಾಕು ಎಂತಹ ಕಷ್ಟದ ಹಾದಿಯನ್ನು ಸುಲಭವಾಗಿಸಿಕೊಂಡು ಮುನ್ನಡೆಯುತ್ತಾರೆ . ಅಧಿಕಾರ ಎಂಬುದು ಇತ್ತೀಚೆಗೆ ಮನುಷ್ಯನ ವಿಕಾಸದ ಸತ್ವ ಪರೀಕ್ಷೆಯಾಗಿದೆ. ಲೌಕಿಕ ಆಸೆ ಆಮಿಷ ಗಳನ್ನು ಬಿಟ್ಟು ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿ ಆದರ್ಶ ವ್ಯಕ್ತಿತ್ವವನ್ನು ರೂಢಿಸಿಕೊಂಡು ಬದುಕಬಲ್ಲ ಎಂಬುದಕ್ಕೆ ಜೀವಂತ ವ್ಯಕ್ತಿತ್ವದ ದಾರ್ಶನೀಯ ವ್ಯಕ್ತಿ ಫಾದರ್ ರೋಹನ್ ಡಿ ಅಲ್ಮೇಡಾ ರವರು. ಮಾನವನ ಜನ್ಮದ ಸಾರ್ಥಕತೆ ಮೌಲ್ಯಯುತ ಜೀವನವನ್ನು ನಡೆಸುವುದರಿಂದ ಮಾತ್ರ ರೂಪಗೊಳ್ಳಬಹುದು ಎಂಬ ಬಲವಾದ ನಂಬಿಕೆಯುಳ್ಳ ಅಪೂರ್ವ ಅನರ್ಘ್ಯ ವ್ಯಕ್ತಿ ಇವರು. ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಶಾಲೆಗೆ 2019ರಲ್ಲಿ ಪ್ರಾಂಶುಪಾಲರಾಗಿ ಬಿಜಾಪುರದಿಂದ ವರ್ಗಾವಣೆಗೊಂಡು ತನ್ನ ಕಾರ್ಯ ಪ್ರವೃತ್ತಿಯನ್ನು ಕೈಗೆತ್ತಿಕೊಂಡರು. ಆಗ ತಾನೇ ಚಿಗುರೊಡೆದ ಈ ಶಾಲೆಯನ್ನು ಬಲಿಷ್ಠವಾಗಿ ಹೆಮ್ಮರವಾಗಿ ಬೆಳೆಸಬೇಕೆಂಬ ನಿರ್ಧಾರ ಕೈಗೊಂಡು, ಇಲ್ಲಿಯವರೆಗೆ ಹಗಲು ರಾತ್ರಿ ನಿರಂತರವಾಗಿ ಶ್ರಮಿಸಿದರು.

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತಮ ಶಾಲೆ ಎಂದು ಪ್ರಂಶಸಿಲ್ಪಟ್ಟ ಪತ್ರ
ವಿದ್ಯಾರ್ಥಿಗಳಿಗೆ ಸಿಗುವಂತಹ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಿರದೆ ಅವರು ನಿಜ ಜೀವನದ ನೈತಿಕ ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಂಡು ಬದುಕಿನ ಆರ್ಥಿಕ ಸವಾಲುಗಳನ್ನು ಎದುರಿಸಿ ನಿಂತು, ಸಾಧನೆಯ ತುದಿಯನ್ನು ಮುಟ್ಟಿ, ಸಾಧಕರೆನಿಸಿಕೊಳ್ಳಬೇಕು ಎಂಬ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಡಿಯಲ್ಲಿ ಹಲವು ಕಾರ್ಯಗಾರಗಳನ್ನು ನೀಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು.
ದೇಶ , ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ನಾವೀನ್ಯತೆ ಯಿಂದ ಕೂಡಿದ ಭಾಷಾ ಸಂಗಮ್, ಸಂಸ್ಕೃತಿ ಸಮಾಗಮ್, ಲಾ-ಫೆರಿಯಾ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಸೌಹಾರ್ದ ಐಕ್ಯತೆ ಮನೋಭಾವವನ್ನು ಬೆಳೆಸಿದರು.

enews ಇವರಿಂದ ಕೊಡಲ್ಪಟ್ಟ 24 ರ ಸಾಲಿನ ಅವಾರ್ಡ್



ಸದಾ ವಿಭಿನ್ನ ವಿಶಿಷ್ಟ ರೀತಿಯಲ್ಲಿ ಯೋಚಿಸುವುದು ಇವರ ಕ್ರಿಯಾತ್ಮಕ ಉಜ್ವಲ ಗುಣವನ್ನು ವ್ಯಕ್ತಪಡಿಸುತ್ತದೆ. ಮಾನವೀಯತೆ ಹೆಸರಿನಲ್ಲಿ ಬಡವರಿಗೆ ಸಲ್ಲಬೇಕಾದ ನೆರವು ಕೇವಲ ಒಂದು ಸೀಮಿತ ಸ್ಥಳ, ವರ್ಗ, ಸಂಘ, ಪಂಗಡಕ್ಕೆ ಸೇರದೆ ಅವಶ್ಯಕತೆ ಇರುವವರಿಗೆ ಅದು ನೇರವಾಗಿ ಸೇರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದವರು, ಈ ನಿಟ್ಟಿನಲ್ಲಿ ಇವರು ನೀಡಿರುವ ಸೇವೆ ಅಪಾರ ಮತ್ತು ಶ್ಲಾಘನೀಯ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಉದ್ದೇಶ , ನಡುವಳಿಕೆ, ತಪ್ಪಾಗಿದ್ದು, ಸಮಂಜಸವಲ್ಲದ ನಿರ್ಧಾರಗಳು, ಇನ್ನಿತರ ಘಟನೆಗಳು ಜನಸಾಮಾನ್ಯರಿಗೆ ಸಮಸ್ಯೆಯನ್ನು ಸೃಷ್ಟಿತ್ತದೆ ಎಂದು ಅವರಿಗೆ ತಿಳಿದರೆ ಅದರ ವಿರುದ್ಧ ನೇರವಾಗಿ ದಿಟ್ಟವಾಗಿ ಪ್ರಶ್ನಿಸುವಂತಹ ಕೆಚ್ಚೆದೆಯ ಮನಸ್ಸು ಉಳ್ಳವರು.
ಯಾವುದೇ ಯೋಜನೆಗಳನ್ನು ಅವರು ಪ್ರಾರಂಭಿಸುವಾಗ ಸಂಬಂಧಪಟ್ಟವರೊಂದಿಗೆ ಸುದೀರ್ಘ ಆಲೋಚಿಸಿ , ಚರ್ಚೆ ನಡೆಸಿ ಒಂದು ವರ್ಷದ ಮುಂಚಿತವಾಗಿಯೇ ಪ್ರಕ್ರಿಯೆ ಶುರುಮಾಡುತ್ತಿದ್ದರು. ಹಾಗಾಗಿ ಉತ್ತಮ ಸಂಘಟನಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ



ಬ್ರಿಟಿಷ್ ಶಾಲೆಯೊಂದಿಗೆ ಶಿಕ್ಷಣದ ವಿನಿಮಯ ಕಾರ್ಯಕ್ರಮ
ಮನುಷ್ಯ ಆದರ್ಶ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಸ್ವಂತಿಕೆಯ ಲಾಭದ ಯೋಚನೆ ಬಿಟ್ಟು , ಇತರರ ಬಾಳಿಗೆ ಬೆಳಕಾಗುವ ಧೇಯೋದ್ದೇಶಗಳನ್ನು , ಉದಾತ್ತ ಮತ್ತು ಉದಾರ ಮನೋಭಾವ ಹೊಂದಿರಬೇಕು ಎಂಬ ನೀತಿಯ ಪಾಠವನ್ನು ತನ್ನ ವ್ಯಕ್ತಿತ್ವದ ಮೂಲಕ ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಅಪೂರ್ವ ಶ್ರೇಷ್ಠ ವ್ಯಕ್ತಿ ಫಾದರ್ ರೋಹನ್ ಡಿ ಅಲ್ಮೇಡಾ ರವರು
ಅವರು ಎಷ್ಟೇ ಎತ್ತರಕ್ಕೆ ಬೆಳೆಯುತ್ತಾ ಹೋದರು , ಅವರೊಂದಿಗೆ ಸಂಪರ್ಕ ಹೊಂದಿದವರ ಜೊತೆಗಿನ ಒಡನಾಟ ದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಿರಲಿಲ್ಲ ಎಲ್ಲರೊಂದಿಗೆ ಸರ್ವೆ ಸಾಮಾನ್ಯ ರಂತೆ ಬೆರೆಯುತ್ತಿದ್ದರು. ಸರಳ ಸಜ್ಜನಿಕೆಯ ಸಿಂಪಲ್ ವ್ಯಕ್ತಿ ಯಾಗಿದ್ದರಿಂದಲೇ ಜನರ ಮನಸ್ಸಿನಲ್ಲಿ ಪ್ರೀತಿಯ ಅಭಿಮಾನ ಗಿಟ್ಟಿಸಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಆತ್ಮೀಯರು, ಹಿರಿಯ ವ್ಯಕ್ತಿಗಳು ಇವರೊಂದಿಗೆ ಸಮಾಲೋಚಿಸಿ ತಮ್ಮ ಸಮಸ್ಯೆ ಗಳಿಗೆ ಸಲಹೆ ಪಡೆಯುತ್ತಿದ್ದರು.
ಸಾಧಾರಣ ಜೀವನ ಇಷ್ಟಪಡುವ ಇವರು ಆಡಂಬರದ ಬದುಕಿನಿಂದ ದೂರ ಉಳಿದವರು ಹೆಸರು ಪದವಿ, ಅಧಿಕಾರಗಳನ್ನು ಅಪೇಕ್ಷಿಸಿದವರಲ್ಲ, ಆದರೂ ಹಲವಾರು ಪ್ರಶಸ್ತಿ ಇವರನ್ನು ಹರಸಿ ಬಂದವು. 2024 ರ ” ಡೈನಾಮಿಕ್ ಪ್ರಿನ್ಸಿಪಾಲ್ ” ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಸ್ತನ್ನು ಮೈಗೂಡಿಸಿಕೊಂಡು ನಿರ್ಗತಿಕರ ಉದ್ಧಾರದ ಕನಸನ್ನು ಕಣ್ಣುಗಳಲ್ಲಿ ತುಂಬಿಕೊಂಡು , ಸಹಾಯ ಹಸ್ತವನ್ನು ಚಾಚುತ್ತ, ಗಾಂಭೀರ್ಯತೆಯಿಂದ ಕೂಡಿರುವ ಅವರನ್ನು ನೋಡಿದರೆ, ಎಂಥವರಿಗಾದರೂ ಅವರನ್ನು ಒಮ್ಮೆ ಮಾತನಾಡಿಸಬೇಕೆಂಬ ಬಯಕೆ ಉಂಟಾಗುತ್ತದೆ. ಮತ್ತೊಬ್ಬರ ಜೀವನವನ್ನು ಅನುಕರಣೆ ಮಾಡದೆ ತನ್ನದೇ ಸ್ವಂತ ನಿಲುವುಗಳನ್ನು ಇಟ್ಟುಕೊಂಡು ಅಮ್ಮನ ಮಾತಿನಂತೆ ನಡೆದು ಬಂದಂತಹವರು. ಮತ್ತು ಇತರರಿಗೆ ಆದರ್ಶಪ್ರಾಯರಾಗಿದ್ದಾರೆ.ಮಾನವೀಯತೆಯ ಸಾಹುಕಾರನಾಗಿ, ಕ್ರಿಯಾಶೀಲರಾಗಿ, ಸಂಘಟನಾಕಾರರಾಗಿ, ಶೈಕ್ಷಣಿಕ ಸಲಹಗಾರರಾಗಿ, ಉತ್ತಮ ಪ್ರಾಂಶುಪಾಲರಾಗಿ, ಜನಸ್ನೇಹಿಯಾಗಿ, ಸಮಾಜ ಸುಧಾರಕರಾಗಿ, ಆಧ್ಯಾತ್ಮಿಕತೆಯ ಪರಮೋಚ್ಚ ಗುರುವಾಗಿ, ಮೇಧಾವಿಯಾಗಿ ಸುಸಂಸ್ಕೃತರಾಗಿ ಬದುಕಿನ ಮೌಲ್ಯಗಳಿಗೆ ಬೆಲೆ ಕೊಟ್ಟು ಜೀವನವನ್ನು ಸಾರ್ಥಕ ಗಳಿಸಿಕೊಂಡ ಫಾದರ್ ರೋಹನ್ ಡಿ ಅಲ್ಮೇಡಾ ಅವರನ್ನು ಸೇಂಟ್ ಜೋಸೆಫ್ಸ ಶಾಲೆ ಸದಾ ಸ್ಮರಿಸಿಕೊಳ್ಳುತ್ತದೆ.

ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮದಲ್ಲಿ

ಖ್ಯಾತ ವಿಕೇಟ್ ಕೀಪರ್ ಸೈಯದ್ ಕಿರ್ಮಾನಿಯ ಭೇಟಿ ಸಂದರ್ಭ
2025 ರಲ್ಲಿ ಇವರಿಗೆ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗಾ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾಗಿ ವರ್ಗಾವಣೆ ಗೊಂಡಿರುವಾಗ ಅವರಿಗೆ ಎಲ್ಲಾ ರೀತಿಯಲ್ಲಿ ಶುಭ ಯಶಸ್ಸು ಪ್ರಾಪ್ತಿಯಾಗಲೆಂದು ನಾವು ಹಾರೈಸುತ್ತೇವೆ.
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗಾ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾಗಿ ಹುದ್ದೆ ಸ್ವೀಕಾರ ಸಂದರ್ಭ
