ಶ್ರೀನಿವಾಸಪುರ: ಕಂದಾಯ ಇಲಾಖೆ ಜಮೀನು ಸರ್ವೆ ಕಾರ್ಯ ಕೈಗೊಂಡು, ಜಮೀನು ವಿವಾದ ಪರಿಹರಿಸಬೇಕು. ಸಾಗುವಳಿ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಂದಾಯ ಅದಾಲತ್ ನಡೆಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಖಾತಾ ಅದಾಲತ್ ನಡೆಸಿ ಅರ್ಹ ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಹೇಳಿದರು.
ಜಲ ಜೀವನ ಮಿಷನ್ ಯೋಜನೆಯಡಿ ರೂ.350 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುವುದು. ರೂ.40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ – ಕೋಲಾರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ರೂ.20 ಕೋಟಿ ವೆಚ್ಚಮಾಡಲಾಗುವುದು. 2000 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಂದಾಯ ಇಲಾಖೆ ಕಾರ್ಯ ಚಟುವಟಿಕೆ ಚುರುಕುಗೊಳಿಸಲಾಗಿದೆ. 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ತಿಂಗಳಲ್ಲಿ ಎರಡು ಸಲ ಜನಸಂಪರ್ಕ ಸಭೆ ನಡೆಸಲಾಗುವುದು. ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಪೌತಿ ಖಾತೆ ಮಾಡಿಕೊಡಲು ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸಂತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆ ಪಾಲನೆಗೆ ಆದ್ಯತೆ ನೀಡಬೇಕು. ಬರ ಪರಿಸ್ಥಿತಿ ಇರುವುದರಿಂದ ಅರ್ಹ ಫಲಾನುಭವಿಗಳು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಯದ್ಯೋಗ ಖಾತ್ರಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಗಳಲ್ಲಿ ದೊರೆಯು ಸೌಲಭ್ಯಗಳ ಮಾಹಿತಿ ನೀಡಿದರು. ಸೌಲಭ್ಯಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 102 ಅರ್ಜಿ ಸ್ವೀಕರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕಲ್, ಉಪ ವಿಭಾಗಾಧಿಕಾರಿ ಎಚ್.ಎಸ್.ವೆಂಕಟಲಕ್ಷ್ಮಿ, ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷ್ಮಿ, ಉಪ ತಹಶೀಲ್ದಾರ್ ಕೆ.ಎನ್.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಯಾನಂದ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಷರೀಫ್, ಬಿ.ಎಸ್.ರೋಹಿತ್ ಗುರುರಾಜರಾವ್, ಹರಿ. ರೋಹಿತ್ ಇದ್ದರು.