ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ ಏ.17 : ಹಿಂದುಳಿದವರಿಗೆ ಸರ್ಕಾರಿ ಸೌಲತ್ತು ಸಿಗಬೇಕಾದರೆ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗದವರು ಸಂಘಟಿತರಾಗಬೇಕೆಂದು ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎ.ಪ್ರಸಾದ್ಬಾಬು ಕರೆ ನೀಡಿದರು.
ಅವರು ಮುಳಬಗಿಲು ಪಟ್ಟಣದ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಳಬಾಗಿಲು ತಾಲ್ಲೂಕು ಮಟ್ಟದ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು. ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ ಜಾತಿಗಳ ಸಮುದಾಯಗಳಿದ್ದು, ಇವರ ಅನೇಕ ಸಮಸ್ಯೆಗಳು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವುದು ಕಂಡುಬಂದಿದೆ. ಈ ದಿಸೆಯಲ್ಲಿ ಸರ್ಕಾರಕ್ಕೆ ಸರಿಯಾದ ತಿಳುವಳಿಕೆಯಾಗಬೇಕಾದರೆ ಕೋಲಾರ ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳು ಒಕ್ಕೂಟದ ಅಡಿಯಲ್ಲಿ ಸಂಘಟಿತರಾಬೇಕೆಂದರು.
ಮುಂಬರುವ ದಿನಗಳಲ್ಲಿ ಕೋಲಾರ ನಗರದಲ್ಲಿ ಹಿಂದುಳಿದ ವರ್ಗಗಳ ಹರಿಕಾರರಾದ ದೇವರಾಜ ಅರಸು ಪ್ರತಿಮೆ ಅನಾವರಣ, ಪ್ರತಿ ತಾಲ್ಲೂಕಿನಲ್ಲೂ ಸರ್ಕಾರದ ನೆರವಿನಲ್ಲಿ ಸಮುದಾಯ ಭವನಗಳನ್ನು, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ರಾಜಕೀಯವಾಗಿ ಮತ್ತು ಸರ್ಕಾರದ ಸ್ಥಾನ ಮಾನಗಳನ್ನು ಪಡೆಯುವಲ್ಲಿ ಜಿಲ್ಲೆಯ ಎಲ್ಲಾ ಹಿಂದುಳಿದ ನಾಯಕರು ಪಕ್ಷಾತೀತವಾಗಿ ಸಂಘಟಿತರಾಬೇಕೆಂದು ಕರೆ ನೀಡಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ನಿರ್ದೇಶಕರಾದ ಕಲಾವಿದ ವಿಷ್ಣು ಮಾತನಾಡಿ ಇತ್ತೀಚೆಗೆ ಕೋಲಾರ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ಮುಖಂಡರು ಸಂಘಟಿತರಾಗಿ ಸರ್ಕಾರದ ಧೋರಣೆಯನ್ನು ಪ್ರಭಲವಾಗಿ ಖಂಡಿಸುತ್ತಿರುವುದು ಕಾಣುತ್ತಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದುಳಿದ ಜಾತಿಗಳ ಪರವಾಗಿ ಧ್ವನಿ ಎತ್ತಿದ್ದನ್ನು ಜಿಲ್ಲೆಯ ಜನರು ಅರ್ಥ ಮಾಡಿಕೊಂಡು ಕಡುಬಡತನದಲ್ಲಿರುವ ಹಿಂದುಳಿದವರ ಸೌಲತ್ತುಗಳ ಪಡೆಯುವ ದಿಸೆಯಲ್ಲಿ ಸಂಘಟಿತರಾಗಬೇಕೆಂದು ಸಭೆಯಲ್ಲಿ ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ಪಲ್ಗುಣ ಮಾತನಾಡಿ ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಘಟಕಗಳನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಮೊದಲ ಪ್ರಯತ್ನವಾಗಿ ಮುಳಬಾಗಿಲು ತಾಲ್ಲೂಕಿನಲ್ಲಿ ಇಂದು ಪದಾಧಿಕಾರಿಗಳ ಆಯ್ಕೆ ಪೂರ್ವಭಾವಿ ಸಭೆ ನಡೆಯುತ್ತಿದೆ. ಈ ಭಾಗದ ಎಲ್ಲಾ ಸಮುದಾಯಗಳನ್ನು ಜೊತೆಯಲ್ಲಿ ಕರೆದೊಯ್ಯುವಂತಹ ಮುಖಂಡನ ಆಯ್ಕೆಯ ವಿಷಯದಲ್ಲಿ ಪಾರದರ್ಶಕತೆಯಿಂದ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು. ಇದೇ ರೀತಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಒಕ್ಕೂಟವನ್ನು ಬಲಪಡಿಸಲಾಗುವುದು ಎಂದರು.
ಒಕ್ಕೂಟದ ಉಪಾಧ್ಯಕ್ಷ ನಂದೀಶ್ ಮಾತನಾಡಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಒಕ್ಕೂಟದ ಕೋರ್ ಕಮಿಟಿಯ ಸದಸ್ಯರು ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಪ್ರವಾಸ ಮಾಡಿ ಸಂಘಟನೆಗೆ ಪೂರಕವಾಗುವಂತೆ ಎಲ್ಲ ಹಿಂದುಳಿದ ಸಮುದಾಯಗಳ ಅನ್ವಯವಾಗುವಂತೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.
ಒಕ್ಕೂಟದ ಇನ್ನೊರ್ವ ಉಪಾಧ್ಯಕ್ಷರಾದ ರಾಜೇಶ್ಸಿಂಗ್ ರವರು ಮಾತನಾಡಿ ಜಿಲ್ಲೆಯಲ್ಲಿರುವ ಶೇಕಡ 80ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಕಳೆದ ಎರಡು ವರ್ಷದಿಂದ ಸರ್ಕಾರದಿಂದ ಯಾವುದೇ ನೆರವು ಅನುದಾನ ವಿದ್ಯಾರ್ಥಿ ವೇತನ ಜೊತೆಗೆ ಗಂಗಕಲ್ಯಾಣ ಇತ್ಯಾದಿ ಯೋಜನೆಗಳನ್ನು ಮೊಟುಕು ಮಾಡಿರುವುದು ದುರದೃಷ್ಠಕರ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಡೆಕೊರೇಟ್ ಕೃಷ್ಣ ಮಾತನಾಡಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದುಳಿದವರ ಪರ ಕೇವಲ ಮತ ಬೇಡಿಕೆಗೆ ಮಾತ್ರ ಬರುತ್ತಾರೆ. ಅವರ ಕಷ್ಠಗಳಿಗೆ ಸ್ಪಂಧಿಸುವುದಿಲ್ಲ ಎಂದು ದೂರಿದರು.
ಮುಳಬಾಗಿಲಿನ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಸದಸ್ಯರಾದ ಎನ್.ವೆಂಕಟೇಶ್ಗೌಡ ಮಾತನಾಡಿ ಹಿಂದಿನ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಹಿಂದುಳಿದವರಿಗೆ ಮತ್ತು ಎಲ್ಲಾ ಸಮುದಾಯಗಳಿಗೆ ಸಮರ್ಪಕವಾದ ಸೌಲತ್ತು ಮತ್ತು ಅನುದಾನಗಳನ್ನು ನ್ಯಾಯಬದ್ದವಾಗಿ ಸಿಗುತ್ತಿತ್ತು. ಆದರೆ ಈ ಸರ್ಕಾರದಲ್ಲಿ ಮಲತಾಯಿ ದೋರಣೆ ಕಾಣುತ್ತಿರುವುದು ದುರದೃಷ್ಠಕರ ಎಂದರು ಆರೋಪಿಸಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಗಣೇಶ್, ಮುಖಂಡರಾದ ಸುರೇಶ್ಗೌಡ, ಖಾದ್ರಿಪುರ ಶಿವಣ್ಣ, ವಿ.ರಾಮಕೃಷ್ಣ, ಗಣೇಶ್ಯಾದವ್, ಎನ್.ಶಂಕರ್, ಸುಬ್ರಮಣಿ, ಮೀಸೆ ಕೃಷ್ಣಪ್ಪ, ಮಂಜುನಾಥ್.ಜೆ.ಎಸ್, ಶಂಕರ್ಸಿಂಗ್, ಕೃಷ್ಣ, ವೆಂಕಟೇಶ್, ರಘುಪತಿ, ಕೇಶವ, ವಿಶ್ವಕರ್ಮ ಸಮಾಜದ ಕುಮಾರ್ ಶಂಕರ್, ಬಲ್ಲ ದೇವರಾಜ್, ನಾರಾಯಣಸ್ವಾಮಿ ಸೇರಿದಂತೆ ವಿವಿಧ ಸಮುದಾಯಗಳ ನೂರಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.