

ಉಡುಪಿ: 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲಾ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29ರಂದು ಆಯಾ ಕ್ಯಾಥೆಡ್ರಲ್ ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆ ಅರ್ಪಿಸಿ ತಮ್ಮ ಸಂದೇಶದಲ್ಲಿ ಹಳೆಯ ಒಡಂಬಡಿಕೆಯಿಂದ ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ ಜುಬಿಲಿ ಮಹೋತ್ಸವದ ಅರ್ಥ ಮತ್ತು ಮಹತ್ವವನ್ನು ವಿವರಿಸಿದರ. ಮಹೋತ್ಸವವು ಐದು ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ ಅವರು
ಜುಬಿಲಿ ಎಂದರೆ ಪಂಚ ‘ಸ’ ಗಳ ಸುಮಧರ ಸಮ್ಮಿಲನವೆ ಜುಬಿಲಿ ಸಂಭ್ರಮದ ಸಂವತ್ಸರ. ಸ್ಮರಣೆ, ಸಂತಾಪ, ಸಂಧಾನ, ಸನ್ಮಾರ್ಗ ಮತ್ತು ಸಂಭ್ರಮ. ನಮ್ಮ ದೈನಂದಿನ ಜೀವನದಲ್ಲಿ ದೇವರ ಪ್ರೀತಿಯನ್ನು ಸ್ಮರಣೆ ಮಾಡುವುದರ ಮೂಲಕ, ದೇವರು ಮತ್ತು ಸಮಾಜದೊಂದಿಗೆ ಸಂಧಾನ ಮತ್ತು ಸಾಮರಸ್ಯದ ಮೂಲಕ ಸನ್ಮಾರ್ಗದಲ್ಲಿ ಬದುಕುವ ಮೂಲಕ ಸಂಭ್ರಮದ ಆಚರಣೆ ಮಾಡುವುದು ಮಹೋತ್ಸವದ ಮುಖ್ಯ ಉದ್ದೇಶ. ಜುಬಿಲಿ ವರ್ಷವು ದೇವರ ಕೊಡುಗೆಯಾಗಿದ್ದು ಮಹೋತ್ಸವವನ್ನು ಆಚರಿಸುವಾಗ ನಾವೆಲ್ಲರೂ ಸಮುದಾಯಕ್ಕೆ ಸಮೃದ್ಧಿಯನ್ನು ತರುವಲ್ಲಿ ದೇವರ ಆಶೀರ್ವಾದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕು ಎಂದರು.
ಸತತ ಒಂದು ವರ್ಷ ನಿರಂತರ ಕಾರ್ಯಕ್ರಮಗಳ ಮೂಲಕ ಜುಬಿಲಿ ವರ್ಷದ ಆಚರಣೆ ನಡೆಯಲಿದ್ದು, ಇದು ಹೊರಗಿನ ಆಡಂಬರಕ್ಕೆ ಅವಕಾಶವಿಲ್ಲ ಬದಲಾಗಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ವರ್ಷವಿಡೀ ಧರ್ಮಪ್ರಾಂತ್ಯದ ಚರ್ಚುಗಳ ಪ್ರತಿ ಕುಟುಂಬಗಳಿಗೆ ಪವಿತ್ರ ಶಿಲುಬೆಯ ಮೆರವಣಿಗೆ ಜರುಗಲಿದ್ದು ಈ ಮೂಲಕ ಆಧ್ಯಾತ್ಮಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ|ವಿನ್ಸೆಂಟ್ ಕ್ರಾಸ್ತಾ, ಸಂಪದ ನಿರ್ದೇಶಕ ವಂ|ರೆಜಿನಾಲ್ಡ್ ಪಿಂಟೊ, ಧಾರ್ಮಿಕ ಆಯೋಗಳಗಳ ವಂ|ಸಿರಿಲ್ ಲೋಬೊ, ವಂ|ವಿಲ್ಸನ್ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರುಗಳಾದ ವಂ|ಪ್ರದೀಪ್ ಕಾರ್ಡೋಜಾ, ವಂ|ಡಾ|ಜೆನ್ಸಿಲ್ ಆಳ್ವಾ, ಅತಿಥಿ ಧರ್ಮಗುರುಗಳಾದ ವಂ|ರೋನ್ಸನ್ ಡಿಸೋಜಾ, ವಂ|ಮನೋಜ್ ಫುರ್ಟಾಡೊ, ವಂ|ವಲೇರಿಯನ್ ಕ್ಯಾಸ್ತಲಿನೋ, ವಂ|ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.
ಬಾಕ್ಸ್ ಐಟಮ್
ಜುಬಿಲಿ ವರ್ಷ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಹಿನ್ನಲೆಯಲ್ಲಿ ಪವಿತ್ರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವಿದ್ದು ಧರ್ಮಪ್ರಾಂತ್ಯದಲ್ಲಿ ಅಧಿಕೃತ ಪವಿತ್ರ ಯಾತ್ರಾ ಸ್ಥಳಗಳಾದ ಮಿಲಾಗ್ರಿಸ್ ಕ್ಯಾಥೆಡ್ರಲ್ ಕಲ್ಯಾಣಪುರ, ಸೈಂಟ್ ಲಾರೆನ್ಸ್ ಮೈನರ್ ಬೆಸಿಲಿಕಾ ಅತ್ತೂರು ಕಾರ್ಕಳ, ಸ್ಟೆಲ್ಲಾ ಮಾರಿಸ್ ಪುಣ್ಯಕ್ಷೇತ್ರ ಕಲ್ಮಾಡಿ ಹಾಗೂ ಸಂತ ಅಂತೋನಿಯವರ ಪುಣ್ಯಕ್ಷೇತ್ರ ಕೆರೆಕಟ್ಟೆ ಹೊಸಂಗಡಿ ಇಲ್ಲಿಗೆ ವರ್ಷದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಜೀವನದಲ್ಲಿ ಆಧ್ಯಾತ್ಮಿಕ ಆನಂದವನ್ನು ಪಡೆಯಲು ಧರ್ಮಾಧ್ಯಕ್ಷರು ಸಲಹೆ ನೀಡಿದರು.



















