ರಂಗೇರಿದ ಖೋ-ಖೋ ಕ್ರೀಡೆ ಉತ್ಸಾಹದಿಂದ ಭಾಗವಹಿಸುತ್ತಿರುವ ಕ್ರೀಡಾಪಟುಗಳು, ಯುವ ಜನರನ್ನು ಕ್ರೀಡಾಂಗಣದತ್ತ ಸೆಳೆಯುತ್ತಿರುವ ರಾಷ್ಟ್ರೀಯ ಖೋ-ಖೋ ಆಯ್ಕೆ ಪ್ರಕ್ರಿಯೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಖೋಖೋ ಗ್ರಾಮೀಣ ಜನಪ್ರಿಯ ಕ್ರೀಡೆ, ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಖೋಖೋ ಆಡುವ ವಿಧ್ಯಾರ್ಥಿಗಳು ಇದ್ದಾರೆ, ಯುವ ಜನತೆಯಲ್ಲಿ ಕ್ರಿಯಾಶೀಲತೆ ಹಾಗೂ ಉತ್ಸಾಹ ತುಂಬುವ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಎಲ್ಲಾ ವರ್ಗದ ಯುವ ಜನರು ಭಾಗವಹಿಸುತ್ತಾರೆ ಏಕೆಂದರೆ ಇಲ್ಲಿ ದೈಹಿಕ ಆರೋಗ್ಯ ಮಾತ್ರವೇ ಬಂಡವಾಳ, ಆರ್ಥಿಕ ಹೊರೆ ಅಷ್ಟೇನೂ ಇರುವುದಿಲ್ಲ. ಹಾಗಾಗಿ ದೇಶದ ಎಲ್ಲಾ ಗ್ರಾಮೀಣ ಮತ್ತು ನಗರಗಳಲ್ಲಿ ಈ ಕ್ರೀಡೆ ಜನಪ್ರಿಯವಾಗಿದೆ. ಇದೀಗ ಕಳೆದ ಎರಡು ದಿನಗಳಿಂದ ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಯುವ ಜನರ ಆಕರ್ಷಕ ತಾಣವಾಗಿದೆ. ಸದಾ ಮೊಬೈಲ್ ಕೈಯಲ್ಲಿಡಿದು ಚಾಟ್ ಮಾಡುವ ಯುವಕ ಯುವತಿಯರು ತಮ್ಮ ಮೊಬೈಲ್‍ಗಳನ್ನು ಜೇಬಿಗಿಳಿಸಿ ಕ್ರೀಡಾಂಗಣದತ್ತ ಮುಖಮಾಡಿರುವುದು ಕಾಣಬರುತ್ತಿದೆ. ಯಾಕೆಂದರೆ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಬೆಂಗಳೂರು, ಕೋಲಾರ ಜಿಲ್ಲಾ ಖೋ-ಖೋ ಸಂಸ್ಥೆ, ಕೋಲಾರ ಖೋ-ಖೋ ಹಾಗೂ ಕಬ್ಬಡಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 40ನೇ ರಾಷ್ಟ್ರೀಯ ಜ್ಯೂನಿಯರ್ ಬಾಲಕ/ಬಾಲಕೀಯರ ಖೋ-ಖೋ ರಾಜ್ಯ ತಂಡಕ್ಕೆ ಅಯ್ಕೆ ಮತ್ತು ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ್ದು, ಇಡೀ ಕ್ರೀಡಾಂಗಣ ಕ್ರೀಡಾಪಟುಗಳಿಂದ ತುಂಬಿ ತುಳುಕುತ್ತಿದೆ.


ಅಷ್ಟೇನೂ ಮೂಲಭೂತ ಸೌಲಭ್ಯಗಳು ಇಲ್ಲದೆ, ಸಿಂಥಟಿಕ್ ಟ್ರ್ಯಾಕ್ ಇಲ್ಲದೆ ಇರುವ ಇನ್ನೂ ರಿಪೇರಿ ಹಂತದಲ್ಲಿರುವ ಕ್ರೀಡಾಂಗಣದಲ್ಲೇ ಈ ಆಯ್ಕೆ ಕ್ಯಾಂಪ್ ನಡೆಯುತ್ತಿದ್ದರೂ, ಕ್ರೀಡಾಪಟುಗಳಲ್ಲಿ ಉತ್ಸಾಹ ಹಾಗೂ ಹುಮ್ಮಸ್ಸಿಗೆ ಕೊರತೆಯಿಲ್ಲದೆ ಭಾಗವಹಿಸಿದ್ದರು. ಈ ಕ್ರೀಡೆಯಲ್ಲಿ ಬಹುತೇಕ ಗ್ರಾಮೀಣ ಮಕ್ಕಳೇ ಹೆಚ್ಚು ಭಾಗವಹಿಸಿರುವುದು ನಿಜಕ್ಕೂ ಗಮನ ಸೆಳೆಯುವಂತಾಗಿತ್ತು. ಇದಕ್ಕೆ ಉತ್ತಮ ನಿರ್ದಶನವೆಂದರೆ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಯಾವುದೇ ಕ್ರೀಡಾ ಚಟುವಟಿಕೆ ನಡೆಯದಿದ್ದರೂ ಆಯ್ಕೆ ಕ್ಯಾಂಪ್‍ಗೆ ರಾಜ್ಯದ 30 ಜಿಲ್ಲೆಗಳಿಂದ, 160 ಬಾಲಕರು 85 ಬಾಲಕೀಯರು, ಒಟ್ಟು 245 ಕ್ರೀಡಾ ಪಟುಗಳು,
ಬಂದಿರುವುದು ಈ ಕ್ರೀಡೆಗಿರುವ ಮಹತ್ವ ತಿಳಿಯುತ್ತದೆ. ಫೆಡರೇಷನ್ ನಿಯಮಾವಳಿ ಪ್ರಕಾರ ಫಿಟ್‍ನೆಸ್ ಸೆಲೆಕ್ಷನ್ ನಡೆದ ನಂತರ ರಾಜ್ಯ ಮಟ್ಟದ ಸೆಲೆಕ್ಷನ್ ಕ್ಯಾಂಪ್‍ನಲ್ಲಿ ಭಾಗವಹಿಸಬೇಕು ಅಂತಿದ್ದರೂ, ರಾಜ್ಯ ಫೆಡರೇಷನ್ ವತಿಯಿಂದ ಎಲ್ಲಾ ಮಕ್ಕಳಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ.


03 ದಿನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ 245 ಮಕ್ಕಳ ಪೈಕಿ 25 ಬಾಲಕರು 25 ಬಾಲಕಿಯರನ್ನು ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ. ಸೆ.6 ರಿಂದ ಸೆ.20 ರವರೆಗೆ 15 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ತರಬೇತಿಯು ಕೋಲಾರದ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಂತಿಮವಾಗಿ ರಾಷ್ಟ್ರೀಯ ತಂಡಕ್ಕೆ ರಾಜ್ಯದ ಪರವಾಗಿ 12 ಬಾಲಕೀಯರು 12 ಬಾಲಕರ ಅಂತಿಮ ಪಟ್ಟಿ ಮಾಡಿ ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಕಳುಹಿಸಿಕೊಡಲಾಗುವುದು. ತರಬೇತುದಾರರಾಗಿ ಬೆಳಗಾವಿಯ ವಂದನಾ ಪಾಟೀಲ್, ಮಂಡ್ಯದ ಕ್ಯಾತನಹಳ್ಳಿ ಸರಸ್ವತಿ, ದಾವಣಗೆರೆಯ ಚಂದ್ರು, ಭಾಗವಹಿಸುವರು ಹಾಗೂ ಕ್ರೀಡಾ ಪ್ರಾಧಿಕಾರದಿಂದ ತರಬೇತುದಾರರಾಗಿ ಕೋಲಾರದ ವೆಂಕಟೇಶ್ ಹಾಗೂ ರಾಯಚೂರಿನ ಮಹ್ಮದ್ ಮಸೂದ್ ಭಾಗವಹಿಸಲಿದ್ದಾರೆ.


ಕ್ರೀಡಾಪಟುಗಳಿಗೆ ಆಯ್ಕೆ ಅವಧಿಯಲ್ಲಿ ಉಳಿದುಕೊಳ್ಳಲು ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕ್ರೀಡಾಪಟುಗಳಿಗೆ ಅವಶ್ಯಕವಾದ ಪ್ರೋಟೀನ್‍ಯುಕ್ತ ಗುಣಮಟ್ಟದ ಆಹಾರ ಪೂರೈಸುತ್ತಿರುವುದಾಗಿ ಕೋಲಾರ ಜಿಲ್ಲಾ ಯುವಜನ ಮತ್ತು ಸಬಲೀಕರಣ ಇಲಾಖೆಯ ಕ್ರೀಡಾ ಪ್ರಾಧಿಕಾರ ತರಬೇತುದಾರ ವೆಂಕಟೇಶ್ ಹೇಳುತ್ತಾರೆ.


ಆಯ್ಕೆ ಕ್ಯಾಂಪ್‍ಗೆ ಬೇಟಿ ನೀಡಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ್ ಪಂಚಮವಾಣಿಯೊಂದಿಗೆ ಮಾತನಾಡಿ, ಎರಡು ವರ್ಷದಿಂದ ಕೋವಿಡ್ ಇದ್ದುದ್ದರಿಂದ ಯಾವುದೇ ಕ್ರೀಡಾ ಚಟುವಟಿಕೆ ನಡೆದಿರಲಿಲ್ಲ, ರಾಷ್ಟ್ರೀಯ ಕ್ರೀಡಾ ಫೆಡೆರೇಷನ್ ಪ್ರತಿ ವರ್ಷ ಎಲ್ಲಾ ಕ್ರೀಡೆಗಳ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ಆಯಾ ಕ್ರೀಡೆಯ ನ್ಯಾಷನಲ್ ಚಾಂಪಿಯನ್‍ಶಿಫ್ ಕ್ರೀಡಾಕೂಟ ನಡೆಸಿಕೊಡಬೇಕು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ನಡೆದಿರಲಿಲ್ಲ. ಖೋಖೋ ಫೆಡೆರೇಷನ್ ಆಫ್ ಇಂಡಿಯಾ ನ್ಯಾಷನಲ್ ಚಾಂಪಿಯನ್‍ಶಿಪ್ ಪ್ರಕಟಣೆ ಮಾಡಿತ್ತು, ಕೊರೋನಾ ಲಾಕ್‍ಡೌನ್ ನಿಂದ ಮುಂದೂಡಲಾಗಿತ್ತು.


ಈ ಹಿನ್ನಲೆಯಲ್ಲಿ ಜೂನಿಯರ್ ವಿಭಾಗದಲ್ಲಿ ರಾಜ್ಯ ಖೋಖೋ ಸಂಸ್ಥೆಗೆ ರಾಷ್ಟ್ರೀಯ ಫೆಡರೇಷನ್‍ನಿಂದ ತಂಡ ಕಳುಹಿಸಿಕೊಡಲು ನಿದೇರ್ಶನ ನೀಡಿತು. ರಾಜ್ಯ ಸಂಸ್ಥೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಲುವಾಗಿ ಎಲ್ಲಾ ಜಿಲ್ಲಾ ಖೋಖೋ ಫೆಡರೇಷನ್‍ಗಳ ಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ಹಾಗೂ ಪೂರ್ವ ತಯಾರಿ ಕ್ಯಾಂಪ್ ನಡೆಸಲು ಆಸಕ್ತ ಜಿಲ್ಲಾ ಅಸೋಸಿಯೇಷನ್‍ಗಳಲ್ಲಿ ಮನವಿ ಮಾಡಿದಾಗ ಕೋಲಾರ ಜಿಲ್ಲಾ ಖೋಖೋ ಫೆಡರೇಷನ್ ಈ ಜವಾಬ್ದಾರಿಯನ್ನು ಸ್ವಯಂಸ್ಪೂರ್ತಿಯಿಂದ ಒಪ್ಪಿಕೊಂಡಿತು. ಕೋಲಾರ ಖೋ_ಖೋ ಮತ್ತು ಕಬ್ಬಡಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಖೋಖೋ ಅಂತರ ರಾಷ್ಟ್ರೀಯ ಕ್ರೀಡೆಯಾಗದಿದ್ದರೂ ಈ ಕ್ರೀಡೆ ಸೌಥ್ ಏಷಿಯನ್ ಫೆಡರೇಷನ್ ಗೇಮ್ಸ್‍ಗೆ ಅಂದರೆ ಸ್ಯಾಫ್‍ಗೆ ಸೇರಿಸಲಾಗಿದೆ. ಕಳೆದ ಮೂರು ಕ್ರೀಡಾ ಕೂಟಗಳಲ್ಲಿ ಭಾರತ ಚಿನ್ನದ ಪದಕ ಪಡೆದಿದೆ. ಮುಂದೆ ಈ ಕ್ರೀಡೆಯನ್ನು ಏಷಿಯನ್ ಗೇಮ್ಸ್‍ಗೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ. ಈ ಕ್ರೀಡೆ ಅತ ವೇಗ ಹಾಗೂ ಚಾಕಚಕ್ಯತೆ ಇರುವ ನಿಗದಿತ ಅವಧಿಯಲ್ಲಿ ಮುಕ್ತಾಯವಾಗುವ ಕ್ರೀಡೆಯಾಗಿದ್ದು, ಜಾಗತಿಕವಾಗಿ 40 ದೇಶಗಳಲ್ಲಿ ಖೋಖೋ ಚಾಲ್ತಿಯಲ್ಲಿರುವುದರಿಂದ ಇದು ಅಂತರ ರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುವ ಎಲ್ಲಾ ಅವಕಾಶಗಳು ಇವೆ. ಈ ಕ್ರೀಡೆಯನ್ನು ಜನಪ್ರಿಯಗೊಳಿಸಲು ಕೆಪಿಎಲ್, ಐಪಿಎಲ್ ಮಾದರಿಯಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಚಿಂತನೆ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅರ್ಜುನ್ ಪ್ರಶಸ್ತಿ ಪಡೆದ ಖೋ-ಖೋ ಕ್ರೀಡಾಪಟು ಪ್ರಕಾಶ್, ರಾಜ್ಯ ಕ್ರೀಡಾ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಿಖಾರ್ಜುನ್, ಹಿರಿಯ ಕ್ರೀಡಾಪಟು ವೆಂಕಟ್‍ರಾಮ್, ಕೋಲಾರ ಜಿಲ್ಲಾ ಖೋ-ಖೋ ಸಂಸ್ಥೆಯ ಅಧ್ಯಕ್ಷ ಬ್ಯಾಲಹಳ್ಳಿ ಶಂಕರೇಗೌಡ, ಕೋಟೆ ಶ್ರೀಧರ್, ಮಧುಸೂಧನ್, ಕೆ.ಎಂ.ಉಮಾಶಂಕರ್, ಹಿರಿಯ ಕ್ರೀಡಾಪಟು ಪಿ.ಶ್ರೀಧರ್, ನಗರಸಭೆ ಸದಸ್ಯ ಅಂಬರೀಶ್, ಹಿರಿಯ ಹೋರಾಟಗಾರ ವಕ್ಕಲೇರಿ ರಾಜಪ್ಪ ಮೊದಲಾದವರು.


ಕ್ರೀಡೆಯನ್ನು ಇನ್ನಷ್ಟು ಉತ್ತೇಜಿಸಲು ಮತ್ತು ಯುವಜನರ ಆರೋಗ್ಯ ವೃದ್ಧಿಸಲು ಖೋಖೋ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಶೇ.02 ಮೀಸಲಾತಿಯನ್ನು ನೀಡಲಾಗಿದೆ. ಸರ್ಕಾರದ ಎ ಮತ್ತು ಬಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಶೆ.01 ರಷ್ಟು ಹಾಗೂ ಸಿ ವiತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಶೆ.03 ರಷ್ಟು ಮೀಸಲಾತಿ ನೀಡಲು ಫೆಡರೇಷನ್ ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

  • ಕೆ.ಪಿ.ಪುರುಷೋತ್ತಮ್, ಉಪಾಧ್ಯಕ್ಷರು, ಕರ್ನಾಟಕ ಕ್ರೀಡಾ ಪ್ರಾಧಿಕಾರ. ಬೆಂಗಳೂರು.