JANANUDI.COM NETWORK

ಕುಂದಾಪುರ: ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗರಾಜ್ ಎಂಬಾತನ ಸಾವಿಗೆ ತಿರುವು ಲಭಿಸಿದ್ದು, ಪ್ರೇಮಿಸಿ ವಿವಾಹವಾಗಿದ್ದ ಮಮತಾಳಿಂದಲೇ ಕೊಲೆಯಾಗಿರುವುದಾಗಿ ಈಗ ತಿಳಿದು ಬಂದಿದೆ.
ನಾಗರಾಜನು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪತ್ನಿ ಮಮತಾ ಹೇಳಿಕೆ ನೀಡಿದ್ದರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಶವ ಪರೀಕ್ಷೆಗಾಗಿ ಶವವನ್ನು ವಶಕ್ಕೆ ಪಡೆದಿದ್ದರು.
ಈ ಸಂದರ್ಬ ಮೃತ ನಾಗರಾಜನ ಸಹೋದರಿ ಮೃತದೇಹವನ್ನು ಪರೀಕ್ಷಿಸಿದಾಗ ನಾಗರಾಜನ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾದ ಹೊನ್ನೆಲೆಯಲ್ಲಿ ಪೊಲೀಸರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿದಾಗ ಪತ್ನಿಯೇ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಪೊಲೀಸರು ಪ್ರಮುಖ ಆರೋಪಿಗಳಾದ ಪತ್ನಿ ಮಮತಾ(34), ಆಕೆಯ ಅಕ್ಕನ ಗಂಡ ದಿನಕರ, ದಿನಕರನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಹಾಗೂ ಎದುರುಮನೆಯ ಕುಮಾರ್ ಎಂಬವರನ್ನು ಸೇರಿ ಐದು ಜನರನ್ನು ಬಂಧಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ್(36) ಮೂಲತಃ ಸಾಗರದವನಾಗಿದ್ದು, ಅಂಪಾರು ಮೂಡುಬಗೆಯ ಮಮತಾ ಎಂಬುವಳನ್ನು ಪ್ರೀತಿಸಿ ಮದುವೆಯಾಗಿದ್ದ. ಮೂಡುಬಗೆಯ ವಿವೇಕನಗರದಲ್ಲಿ ಐದುಸೆಂಟ್ಸ್ನಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರು. ವಿರೀತ ಕುಡಿತದ ಚಟವಿದ್ದ ನಾಗರಾಜ್ ಮನೆಗೆ ಬಂದು ಯಾವುದೋ ಕಾರಣಕ್ಕೆ ಹೆಂಡತಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ.
ಮಂಗಳವಾರ ಮನೆಯ ಪಕಾಸಿಗೆ ನೇತಾಡಿದ್ದ ಸ್ಥಿತಿಯಲ್ಲಿ ಪತ್ತೆಯಾದ ನಾಗರಾಜ ಮೃತದೇಹ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಮತಾ ಶಂಕರನಾರಾಯಣ ಪೊಲಿಸರಿಗೆ ದೂರು ನೀಡಿದ್ದಳು. ಬಳಿಕ ನಾಗರಾಜನ ಅಕ್ಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳಗೋಡು ಮಾಲ್ವೆ ಗ್ರಾಮದ ನಿವಾಸಿ ನಾಗರತ್ನ ಹಾಗೂ ಸಂಬಂಧಿಕರು ಶವಗಾರದಲ್ಲಿರುವ ಮೃತದೇಹವನ್ನು ಪರೀಕ್ಷಿಸಿದಾಗ ಮೃತದೇಹದ ಮೈ ಮೇಲೆ ಹಾಗೂ ಕುತ್ತಿಗೆ ಭಾಗಗಳಲ್ಲಿ ಗಾಯಗಳಾಗಿತ್ತು. ಅಲ್ಲದೇ ನಾಗರಾಜ್ ಕೆಲ ದಿನಗಳ ಹಿಂದೆ ಸಹೋದರಿಗೆ ಕರೆ ಮಾಡಿ ಪತ್ನಿ ಮತ್ತು ಕೆಲವರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದರೆಂದು ತಿಳಿಸಿದ್ದರು . ಸಹೋದರಿ ನಾಗರತ್ನ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.
ಮಮತಾಳಿಗೆ ಆಕೆಯ ಅಕ್ಕನ ಗಂಡ (ಬಾವ) ದಿನಕರ್ ಹಾಗೂ ಎದುರು ಮನೆಯ ಮುದುಕ ಕುಮಾರ್ ಹಾಗೂ ಜೊತೆ ಅನೈತಿಕ ಸಂಬಂಧಿ ಇರುವುದಾಗಿಯೂತಿಳಿದು ಬಂದಿದೆ. ಕೊಲೆಯಾದ ನಾಗರಾಜ್ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದುದಾಗಿಯೂ ಆರೋಪಿ ಮಮತಾ ಪೊಲೀಸರಿಗೆ ತಿಳಿಸಿದ್ದು, ನಾಗರಾಜ್ ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿಗಳು ನಾಗರಾಜನ ಕುತ್ತಿಗೆಗೆ ಹಗ್ಗ ಕಟ್ಟಿ ಎರಡೂ ಬದಿಯಿಂದ ಎಳೆದಿದ್ದು, ಆತ ಸತ್ತ ಬಳಿಕ ಅದೇ ಹಗ್ಗದಲ್ಲಿ ಮನೆಯ ಪಕ್ಕಾಸಿಗೆ ಹಗ್ಗ ಕಟ್ಟಿ ನೇತಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಪ್ರಾಪ್ತ ಆರೋಪಿಗಳಿಗೆ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದ್ದು, ಮೂವರು ಆರೋಪಿಗಳಾದ ಮಮತಾ, ದಿನಕರ ಹಾಗೂ ಕುಮಾರ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಮೂಲಗಲಗಳಿಂದ ತಿಳಿದುಬಂದಿದೆ.