ದೇವಾಲಯಗಳಲ್ಲಿ ಸಂಗ್ರಹವಾಗುತ್ತಿರುವ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂದು ಬಿಜೆಪಿ ಮಾದ್ಯಮದ ಮುಖಾಂತರ ಹೇಳಿಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಪ್ರಚಾರಗಳನ್ನು ಮಾಡುತ್ತಿರುವ ಬೆನ್ನಲ್ಲೇ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ “ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿಲ್ಲ” ಎಂದು ರಾಜ್ಯದ ಜನತೆಗೆ ಸ್ಪಷ್ಟನೆಯನ್ನು ಕೊಟ್ಟಿದೆ ಸ್ಪಷ್ಟನೆಯನ್ನು ನೀಡಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಸಲಹೆಗಾರ ರಾಧಾಕೃಷ್ಣ, ರಾಜ್ಯದ ಎ ದರ್ಜೆಯ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಈ ಅಭಿವೃದ್ಧಿ ಸಹಿಸಲಾಗದೆ ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂದು ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಎ ದರ್ಜೆಯ ದೇವಸ್ಥಾನಗಳಲ್ಲಿ ಆಗುತ್ತಿದೆ. ಇದನ್ನು ಬಿಜೆಪಿ ಸಹಿಸುತ್ತಿಲ್ಲ, ಕಾಂಗ್ರೆಸ್ ಸರಕಾರದ ಈ ಅವಧಿಯಲ್ಲಿ ದೇವಾಲಯಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ನೀವು ದೇವಸ್ಥಾನಗಳನ್ನು ರಾಜಕೀಯಕ್ಕೆ ಎಳೆದು ತರವುದನ್ನು ನಿಲ್ಲಿಸಿ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಎ ಗ್ರೇಡ್ ದೇವಾಸ್ಥಾನಗಳಲ್ಲಿ ನಡೆದ ಕಾಮಗಾರಿ ಸೇರಿದಂತೆ ಇತರೆ ಟೆಂಡರ್ ಗಳನ್ನು ಯಾರಿಗೆ ನೀಡಲಾಗಿತ್ತು ಎಂದು ತನಿಖೆ ನಡೆಸಿದರೆ ಬಿಜೆಪಿಯವರ ಯೋಗ್ಯತೆ ತಿಳಿಯುತ್ತದೆ. ಇದನ್ನು ಮುಚ್ಚಿ ಹಾಕುವುದಕ್ಕಾಗಿ ಬಿಜೆಪಿಯವರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮಾತನಾಡಿ, ಕಾಂಗ್ರೆಸ್ ಸರಕಾರದಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಆದರೆ ಬಿಜೆಪಿ ನಾಯಕರು ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ 50 ವರ್ಷದಿಂದ ನಾವು ಹೋರಾಟ ನಡೆಸುತ್ತಿದ್ದು 42 ಸಾವಿರ ದೇವಾಲಯಗಳು ಬೀದಿ ಪಾಲಾಗಿದ್ದವು. ಅದಕ್ಕೆ ಪರಿಹಾರವಾಗಿ ತಸ್ತಿಕ್ ನೀಡಲಾಗುತ್ತಿದೆ. ನಾವೂ ಆ ಹಣದಲ್ಲಿ ದೇವಾಲಯದ ಪೂಜೆಗಳನ್ನು ಮಾಡುತ್ತೇವೆ. ರಾಮಲಿಂಗಾ ರೆಡ್ಡಿ ನಮ್ಮ ಹಲವು ಬೇಡಿಕೆ ಈಡೇರಿಸಿದ್ದಾರೆ. ಈ ಹಿಂದಿನ ಸರಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಹೊಸ ಸರಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ ಎಂದು ಹೇಳಿದ್ದಾರೆ.
ನಮ್ಮ ದೇವಾಲಯದ ಹಣವನ್ನು ಚರ್ಚ್ ಮತ್ತು ಮಸೀದಿಗಳಿಗೆ ನೀಡಲಾಗುತ್ತಿದೆ. ನಮ್ಮ ದೇವಾಲಯದ ಹಣವನ್ನು ನಮ್ಮ ದೇವಾಲಯಕ್ಕೆ ನೀಡದೆ ಮಸೀದಿ, ಚರ್ಚ್ಗಳಿಗೆ ನೀಡುತ್ತಿರುವುದು ಯಾವ ನ್ಯಾಯ ಎಂದು ಇತ್ತೀಚೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಶ್ನಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ತೆರೆಯ ಹಿಂದೆ ಸರಿದಿದ್ದ ಅನಂತ್ ಕುಮಾರ್ ಹೆಗಡೆ, ಲೋಕಸಭೆ ಚುನಾವಣೆ ವೇಳೆ ಕೊಟ್ಟ ಈ ಹೇಳಿಕೆ ಕೂಡ ಸುಳ್ಳು ಎನ್ನುವುದನ್ನು ಅರ್ಚಕರ ಸಂಘವೇ ಬಯಲುಗೊಳಿಸಿದೆ.