

ಕೋಲಾರ, ಅ-21, ಬರದ ನಡುವೆ ಪಶು ಆಹಾರ ಏರಿಕೆ ಮಾಡಿ ರೈತರ ಹಣದಲ್ಲಿ ವಿದೇಶಿ ಯುರೋಪ್ ಪ್ರವಾಸ ಹೊರಟಿರುವ ಒಕ್ಕೂಟದ ವ್ಯವಸ್ಥಾಪಕರು ಹಾಗೂ ನಿರ್ದೇಶಕರುಗಳ ವಿರುದ್ಧ ರೈತ ಸಂಘದಿಂದ ಗಾಂಧಿ ಪ್ರತಿಮೆ ಮುಂದೆ ಸಗಣಿ ಸಮೇತ ಹೋರಾಟ ಮಾಡಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳವಂತೆ ತಹಶೀಲ್ದಾರ್ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿ ಭೂಮಿಗೆ ಹಾಕಿರುವ ಭಿತ್ತನೆ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿಯೇ ಒಣಗಿರುವ ಜೊತೆಗೆ ಬೆಳೆದ ಬೆಳೆಗಳಿಗೆ ರೋಗ ಬಾದೆಯಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯುತ್ತಿರುವುದು ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದರೂ ಸಹ ಪಶು ಆಹಾರದ ಬೆಲೆ ಏರಿಕೆ ಮಾಡಿ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ಒಕ್ಕೂಟದ ವಿರುದ್ಧ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ಆಕ್ರೋಷ ವ್ಯಕ್ತಪಡಿಸಿದರು.
ಬರ ಆವರಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳಿಗೆ ಮೇವು, ನೀರು ಸಿಗದೆ ಹೊರ ರಾಜ್ಯಗಳಿಂದ ದುಬಾರಿ ಬೆಲೆಗೆ ಮೇವು ಖರೀದಿ ಮಾಡಲಾಗದ ಪರಿಸ್ಥಿತಿಯಲ್ಲಿರುವ ರೈತರು ಜಾನುವಾರುಗಳನ್ನು ಸಂತೆಗಳಲ್ಲಿ ಕಟುಕರ ಕೈಗೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದರು ಒಕ್ಕೂಡ ಇಂತಹ ಬೀಕರ ಸಮಸ್ಯೆಯಲ್ಲಿಯೂ ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಿ ಹೈನೋದ್ಯಮಕ್ಕೆ ಕಡೆ ಮೊಳೆ ಒಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರದ 40% ಕಮೀಷನ್ ಹಾವಳಿಗೆ ಉದಾಹರಣೆಯಂತೆ ಒಕ್ಕೂಟ ಟೆಟ್ರಾ ಪ್ಯಾಕ್ ವಿಭಾಗಕ್ಕೆ ಅವಶ್ಯಕತೆ ಇರುವ ಯಂತ್ರೋಪಕರಣವನ್ನು 24 ಕೋಟಿ ಯಂತ್ರವನ್ನು 26 ಕೋಟಿಗೆ ಹೆಚ್ಚುವರಿ 2 ಕೋಟಿ ಹೆಚ್ಚಳ ಮಾಡಿ ಕಂಪನಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬರದ ಪರಿಸ್ಥಿತಿಯಲ್ಲಿಯೂ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ಕುಟುಂಬ ಸಮೇತ ಯುರೋಪ್ ವಿದೇಶಿ ಪ್ರವಾಸ ಅವಶ್ಯಕತೆ ಇದೆಯೇ? ಎಂದು ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಪ್ರವಾಸಕ್ಕೆ ಉಪಯೋಗಿಸುವ ಹಣವನ್ನು ಮೇವಿಗಾಗಿ ಪ್ರತಿ ಡೈರಿಗಳ ಮುಖಾಂತರ ರೈತರಿಗೆ ಬೋನಸ್ ರೂಪದಲ್ಲಿ ನೀಡಿದ್ದರೆ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಉಪಯೋಗವಾಗುತ್ತಿಲ್ಲವೇ? ಒಂದು ಕಡೆ ಒಕ್ಕೂಟದ ನಷ್ಟ, ಮತ್ತೊಂದು ಕಡೆ ಸಾರ್ವಜನಿಕ ರೈತರ ಹಣದಲ್ಲಿ ವ್ಯವಸ್ಥಾಪಕರು, ನಿರ್ದೇಶಕರು ಮೋಜು ಮಸ್ತಿಗಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿರುವುದು ರೈತ ವಿರೋದಿ ದೋರಣೆಯಲ್ಲವೇ? ಎಂದು ಒಕ್ಕೂಟದ ವಿರುದ್ಧ ಕಿಡಿಕಾರಿದರು.
ಕೂಡಲೇ ವಿದೇಶಿ ಪ್ರವಾಸವನ್ನು ರದ್ದುಮಾಡಬೇಕು ಹಾಗೂ ಟೆಟ್ರಾ ಪ್ಯಾಕ್ ವಿಭಾಗದ ಯಂತ್ರೋಪಕರಣ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಪ್ರವಾಸಿ ಹಣವನ್ನು ರೈತರಿಗೆ ಮೇವಿಗಾಗಿ ಮೀಸಲಿಡಬೇಕು ಇಲ್ಲವಾದಲ್ಲಿ ಜಾನುವಾರುಗಳ ಸಮೇತ ಒಕ್ಕೂಟದ ಅಧ್ಯಕ್ಷರ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಸಹಕಾರ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.

